Thursday, June 6, 2013

ಮರ್ಯಾದೆ ಪ್ರಶ್ನೆ

      ಅವಳದು ಒಲವಿನ ಮದುವೆ. ಅವಳು ತಾನು ಪ್ರೀತಿಸಿದ ಹುಡುಗನೊಂದಿಗೆ ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಿದ್ದಳು. ಅದು ಅವಳ ಆಸೆಯೂ ಆಗಿತ್ತು. ಜಾತಿ, ಧರ್ಮ, ಮತ, ಸಂಪ್ರದಾಯಗಳನ್ನು ಧಿಕ್ಕರಿಸಿ ತಾನು ನಂಬಿರುವ ಆದರ್ಶಗಳ ಪರ ನಿಲ್ಲುವುದು ಅವಳಿಗೆ ಎಲ್ಲಿಲ್ಲದ ಖುಷಿಯನ್ನು ತಂದುಕೊಡುತ್ತಿತ್ತು. ಆದ್ದರಿಂದಲೇ ಮನೆಯವರ ವಿರೋಧವನ್ನೂ ಲೆಕ್ಕಿಸದೆ, ಅವರ ಯಾವ ಬೆದರಿಕೆಗಳಿಗೂ ಜಗ್ಗದೆ, ಸಮಾಜಕ್ಕೂ ಹೆದರದೆ ತಾನಂದುಕೊಂಡಿದ್ದನ್ನು ಸಾಧಿಸಿದ್ದಳು. ಜಾತಿ ನೋಡದೆ, ಘಳಿಗೆಗಳ ಲೆಕ್ಕಾಚಾರವಿಲ್ಲದೆ, ಅಂತಸ್ತಿನ ಪ್ರದರ್ಶನವಿಲ್ಲದೆ, ಕಿವಿಗಡಚಿಕ್ಕುವ ಗಟ್ಟಿಮೇಳಗಳಿಲ್ಲದೆ, ಅರ್ಥಹೀನ ಸಂಪ್ರದಾಯಗಳಿಲ್ಲದೆ ಸರಳಾತಿಸರಳವಾಗಿ ಒಂದಷ್ಟು ಮಿತ್ರರ ಸಮ್ಮುಖದಲ್ಲಿ ಮದುವೆಯಾದದ್ದು ಅವಳ ಖುಷಿಯನ್ನು ಇಮ್ಮಡಿಗೊಳಿಸಿತ್ತು. ತನ್ನ ಮನೆಯವರನ್ನು ಕರೆದಿದ್ದಳಾದರೂ ಅವರು ಅವಳ ಮೇಲಿನ ಕೋಪದಿಂದ ಬಂದಿರಲಿಲ್ಲ. ಅವರ ಅನುಪಸ್ಥಿತಿ ಅವಳನ್ನು ತುಸು ಬೇಸರಗೊಳಿಸಿತಾದರೂ ತಾನು ಯಾವುದೇ ತಪ್ಪು ಮಾಡಿಲ್ಲವೆಂದು ಅನಿಸಿದ್ದರಿಂದ, ಮುಂದೊಂದು ದಿನ ತನ್ನನ್ನು ಅರ್ಥಮಾಡಿಕೊಳ್ಳುವರೆಂಬ ನಂಬಿಕೆಯಿಂದ ಬೇಸರವನ್ನು ಹೊರತೋರದೆ ನಗುನಗುತ್ತಿದ್ದಳು.

ಮದುವೆಯಾದ ಮರುದಿನ ತನ್ನವನೊಂದಿಗೆ ಮನೆಗೆ ಹೋದ ಅವಳನ್ನು ಸ್ವಾಗತಿಸಿದ್ದು ಮೂದಲಿಕೆಯ ಚುಚ್ಚುಮಾತುಗಳು, ತಿರಸ್ಕಾರದ ನೋಟಗಳು. ಇವುಗಳನ್ನೆಲ್ಲಾ ಮೊದಲೇ ನಿರೀಕ್ಷಿಸಿದ್ದ ಅವಳಿಗೆ ಬೇಸರವೆನಿಸಲಿಲ್ಲ. ಆದರೆ ಅವಳ ತಾಯಿ  "ನಮ್ಮ ಮನೆಯ ಮಾನ, ಮರ್ಯಾದೆ ಕಳೆದುಬಿಟ್ಟೆಯಲ್ಲಾ, ಈಗ ಎಲ್ಲರೆದುರು ತಲೆಯೆತ್ತಿ ಹೇಗೆ ನಡೆಯಲಿ..?" ಎಂದಾಗ ಮಾತ್ರ ಅವಳಿಗೆ ತಡೆದುಕೊಳ್ಳಲಾಗಲಿಲ್ಲ. "ಅಂಥದ್ದೇನೂ ಮಾಡಿದ್ದೀನಿ ನಿನ್ನ ಮಾನ ಕಳೆಯೋ ಅಂತಹದ್ದು" ಎಂದು ಅವಳು ಕೇಳಿಯೇ  ಬಿಟ್ಟಳು. "ಈಗ ಮಾಡಿರುವುದೇ ಸಾಕು ಇನ್ನೇನು ಮಾಡಬೇಕೆಂದುಕೊಂಡಿದ್ದೀಯಾ ಮಹರಾಯಿತಿ..?" ಎಂದು ಅವರ ತಾಯಿ ಬಾಗಿಲು ಮುಚ್ಚಿಯೇ ಬಿಟ್ಟರು. ಅವಳು ಅಳುತ್ತಾ ಹೊರಟು ಬಂದಳು.

ಅಂದಿನಿಂದ ಅವಳಿಗೆ ಕಾಡುತ್ತಿರುವ ಪ್ರಶ್ನೆ ತನ್ನ ಮನೆಯವರ ಮರ್ಯಾದೆ ಕಳೆಯುವಂತಹ ಕೆಲಸ ತಾನೇನು ಮಾಡಿದೆ ಎನ್ನುವುದು. ಜಾತಿ ಮೀರಿ ಪ್ರೀತಿಸಿದ್ದು ತನ್ನ ತಪ್ಪೇ..? ಪ್ರೀತಿಸಿದವನನ್ನು ಮದುವೆಯಾದದ್ದು ತನ್ನ ತಪ್ಪೇ..? ನೀತಿನಿಯಮಗಳನ್ನು ಮುರಿದು ಸಂಪ್ರದಾಯವನ್ನು ಮೀರಿದ್ದು ತನ್ನ ತಪ್ಪೇ..? ಅಷ್ಟಕ್ಕೂ ತಾನೇನು ಕದ್ದುಮುಚ್ಚಿ ಮದುವೆಯಾಗಿಲ್ಲವಲ್ಲ. ಅವರ ತಮ್ಮನನ್ನು ನನಗೆ ಗಂಟುಹಾಕಬೇಕೆಂಬ ಮಾತು ಬಂದಾಗ ನಾನು ಇಂತಹವನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುವುದಾದರೆ ಇವನನ್ನೇ ಮದುವೆಯಾಗುವುದು ಎಂದು ಪ್ರೀತಿಸಿದ ಹುಡುಗನನ್ನು ಮನೆಗೆ ಕರೆದೊಯ್ದು ಪರಿಚಯಿಸಿದ್ದೆನಲ್ಲ. ಅವರಿಗೂ ನಾನು ಈ ಹುಡುಗನ ಜೊತೆ ಚೆನ್ನಾಗಿ ಬದುಕಬಲ್ಲೆ ಎಂದೆನಿಸಿತ್ತಲ್ಲವಾ. ಹಾಗಿದ್ದರೆ ಈ ವಿರೋಧಕ್ಕೆ ಕಾರಣವೇನು..? ನೆಂಟರ ಮಾತುಗಳಿಗೆ ಹೆದರಿದರೆ..? ಸಮಾಜದ ತಿರಸ್ಕಾರದ ಭಯವೇ..? ಅವರ ಮನದಲ್ಲಿರುವುದಾದರೂ ಏನು..? ಊಹೂಂ.. ಮನ ಗೊಂದಲದ ಗೂಡಾಯಿತೇ ವಿನಃ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆಯಲಿಲ್ಲ. ಮನ ನಿಧಾನವಾಗಿ ಹಳೆಯ ನೆನಪೊಂದಕ್ಕೆ ಜಾರಿತು. 

ಆಗ ಇವಳಿನ್ನೂ ಕಾಲೇಜು ಮೆಟ್ಟಿಲೇರುತ್ತಿದ್ದಳು. ನಿಧಾನವಾಗಿ ಹೊರಜಗತ್ತಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದಳು. ಮದುವೆ ವಯಸ್ಸಿಗೆ ಬಂದಿದ್ದ ಅವಳ ಆಣ್ಣನಿಗೆ (ದೊಡ್ಡಪ್ಪನ ಮಗ) ಮದುವೆ ಮಾಡಬೇಕೆಂದು ಮನೆಯಲ್ಲಿ ನಿಶ್ಚಯಿಸಿ ಹೆಣ್ಣು ಹುಡುಕುತ್ತಿದ್ದರು. ಸಂಪ್ರದಾಯಸ್ಥ ಮನೆಯವರಾದ ಇವರು ಸಾಂಪ್ರದಾಯಿಕ ರೀತಿಯಲ್ಲಿಯೇ ತಮ್ಮ ಮಗನ ಮದುವೆಯನ್ನು ಮಾಡಬೇಕೆಂದುಕೊಂಡಿದ್ದರು. ಮಗ ಸರ್ಕಾರಿ ನೌಕರನಾಗಿದ್ದರಿಂದ ಹೆಚ್ಚಿನ ನಿರೀಕ್ಷೆಯಲ್ಲಿಯೇ ಇದ್ದರು. ಒಂದಷ್ಟು ಹೆಣ್ಣುಗಳನ್ನು ನೋಡಿದರೂ ಜಾತಕ ಕೂಡಿಬರಲಿಲ್ಲ. ಜಾತಕ ಕೂಡಿ ಬಂದರೂ ಹುಡುಗಿ ಚೆನ್ನಾಗಿರಲಿಲ್ಲ ಎಂದು ಕೆಲವರನ್ನು ಇವರೇ ನಿರ್ಲಕ್ಷಿಸಿದ್ದರು. ಅಂತೂ ಇಂತೂ ನೋಡಲು ಲಕ್ಷಣವಾಗಿರುವ ಹುಡುಗಿಯೊಡನೆ ಜಾತಕ ಕೂಡಿಬಂದಿತು. ಆಮೇಲೆ ನಡೆದದ್ದು ಅಕ್ಷರಶಃ ದನದ ವ್ಯಾಪಾರ. ನಮ್ಮ ಹುಡುಗ ಸರ್ಕಾರಿ ನೌಕರ. ತಿಂಗಳಿಗೆ ಇಷ್ಟು ಸಾವಿರ ಸಂಬಳ. ಜೊತೆಗೊಂದಿಷ್ಟು ಎಕರೆ ಜಮೀನು. ನಮಗೆ ಒಂದೈದು ಲಕ್ಷ ನಗದು. ಹುಡುಗನಿಗೆ ಇನ್ನೂರು ಗ್ರಾಮ್ ಬಂಗಾರ, ಒಂದು ಬೈಕ್, ಕೇಳಿದ ಛತ್ರದಲ್ಲಿ ಮದುವೆ. ಇದು ಇವರ ಬೇಡಿಕೆ. ನೀವು ಕೇಳಿದ ರೀತಿಯಲ್ಲಿ ಮದುವೆ ಮಾಡಿಕೊಡ್ತೀವಿ, ಆದರೆ ಎರಡು ಲಕ್ಷ ನಗದು. ನೂರು ಗ್ರಾಮ್ ಬಂಗಾರ ಅಷ್ಟೇ ನಮ್ಮ ಕೈಯಲ್ಲಿ ಕೊಡಲಿಕ್ಕೆ ಆಗುವುದು  ಅಂತ ಹೆಣ್ಣಿನ ಕಡೆಯವರು. ಇಲ್ಲಿಂದ ಶುರು ಹಗ್ಗಜಗ್ಗಾಟ. ಕೊಡಬಹುದು ಕೊಡಿ ಸಾರ್ ಅಂತ ಇವರು, ಇಲ್ಲ ತುಂಬಾ ಜಾಸ್ತಿ ಆಯ್ತು ಅಂತ ಅವರು. ಕೊನೆಗೂ ಮೂರು ಲಕ್ಷ ನಗದು, ಹುಡುಗನಿಗೆ ನೂರು ಗ್ರಾಮ್ ಹುಡುಗಿಗೆ ನೂರು ಗ್ರಾಮ್ ಬಂಗಾರ, ಹೇಳಿದ ಛತ್ರದಲ್ಲಿ ಮದುವೆ.  ಮಗನಿಗೆಂದೇ ಕೇಳಿದ್ದ ಇನ್ನೂರು ಗ್ರಾಮ್ ಬಂಗಾರ ಈಗ ಸೊಸೆಯ ಮೂಲಕ ಬರುತ್ತಿದೆ ಎಂದು ಇವರು, ಹುಡುಗನಿಗೆ ಕೊಡಬೇಕಾಗಿತ್ತು ಈಗ ಮಗಳ ಮೈಮೇಲೆ ಇರುತ್ತದಲ್ಲ ಎಂದು ಅವರು. ಎರಡೂ ಕಡೆಯವರು ಒಪ್ಪಿಕೊಂಡರು. ಈ ಮದುವೆ ಮಾತುಕತೆ ನಡೆದದ್ದು ಇವಳ ಮನೆಯಲ್ಲಿಯೇ. ಅಣ್ಣ ತನ್ನನ್ನು ತಾನು ಮಾರಿಕೊಳ್ಳುತ್ತಿದ್ದಾನೆ ಎಂದೆನಿಸಿತು ಇವಳಿಗೆ. ಮದುವೆಯ ದಿನದ ಹುಚ್ಚಾಟಗಳನ್ನು ನೆನೆಸಿಕೊಳ್ಳದಿರುವುದೇ ಒಳ್ಳೆಯದೆನಿಸಿ ಮತ್ತೆ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತ ಕುಳಿತಳು.

ತನ್ನ ಅಣ್ಣ ಮಾಡಿದ್ದು ತಪ್ಪಲ್ಲವೇ..? ತನ್ನ ಮನೆಯವರು ಮಾಡಿದ್ದು ತಪ್ಪಲ್ಲವೇ..? ಅಣ್ಣನಿಗೆ ತನ್ನ ಹೆಂಡತಿಯನ್ನು ಸಾಕಲಾಗುವುದಿಲ್ಲವೇ..? ಅಷ್ಟಕ್ಕೂ ಅತ್ತಿಗೆ ದುಡಿಯಲು ಹೋಗುವುದಕ್ಕೆ ಬೇಡ ಎನ್ನಲು ಇವನಿಗೇನು ಹಕ್ಕಿದೆ..? ಇವರೆಲ್ಲರ ಅಗತ್ಯಗಳನ್ನು ಪೂರೈಸುವುದಲ್ಲದೇ ಇವರಿಗೆ ದುಡ್ಡು ಬೇರೆ ಕೊಡಬೇಕೆ..? ವರೋಪಚಾರದ ಹೆಸರಿನಲ್ಲಿ ಅಣ್ಣ ತನ್ನನ್ನು ತಾನು ಮಾರಿಕೊಂಡಿದ್ದು, ಅಣ್ಣನನ್ನು ಸಂತೆಯಲ್ಲಿ ಹರಾಜಿಗಿಟ್ಟವರಂತೆ ಇವರು ಮಾರಿದ್ದು ಮರ್ಯಾದೆಯ ಕೆಲಸವೇ..? ಅವನ ಕಾಲುತೊಳೆದು ಮಗಳನ್ನು ಧಾರೆ ಎರೆದುಕೊಡುವುದು ಮಹಾ ಘನಂದಾರಿಯ ಕೆಲಸವೇ..? ಇದಕ್ಕೆಲ್ಲಾ ಸಂಪ್ರದಾಯದ ಅಧಿಕೃತ ಮುದ್ರೆ ಒತ್ತಿರುವ ಸಮಾಜದ್ದು ತಪ್ಪೇ ಅಲ್ಲವೇ..? ಮತ್ತೆ ಮತ್ತೆ ಕೇಳಿಕೊಳ್ಳಲಾರಂಭಿಸಿದಳು. ಮನ ಹಗುರಾಯಿತು. ತನ್ನ ಮೊದಲಿನ ಪ್ರಶ್ನೆಗಳಿಗೆ ಪ್ರಶ್ನೆಗಳ ಮೂಲಕವೇ ಉತ್ತರ ಕಂಡುಕೊಂಡಳು. ಬೆತ್ತಲೆ ಜನರ ನಡುವೆ ಬಟ್ಟೆ ತೊಟ್ಟರೆ ಮನ್ನಣೆಯಿಲ್ಲ ಎನ್ನುವುದು ಅರಿವಾಯಿತು.

ಯಾವುದೇ ಆಡಂಬರವಿಲ್ಲದೇ, ಹುಸಿ ಆದರಗಳಿಲ್ಲದೇ ತಾನು ನಂಬಿಕೊಂಡು ಬಂದ ಆದರ್ಶಗಳ ಪರವಾಗಿ ನಿಂತು ತಾನಂದುಕೊಂಡಂತೆಯೇ ಸರಳವಾಗಿ ಮದುವೆಯಾಗಿದ್ದರ ಬಗ್ಗೆ, ಈ ಎಲ್ಲಾ ಸಂದರ್ಭಗಳಲ್ಲಿಯೂ ಜೊತೆಗೂಡಿದ ತನ್ನವನ ಬಗ್ಗೆ ಹೆಮ್ಮೆಯುಂಟಾಯಿತು. ಅವಳ ತಾಯಿ ಹುಟ್ಟುಹಾಕಿದ್ದ ಮರ್ಯಾದೆಯ ಪ್ರಶ್ನೆಗೆ ಉತ್ತರ ದೊರಕಿತ್ತು. ಈಗ ಅವಳನ್ನು ಕಾಡುತ್ತಿರುವ ಪ್ರಶ್ನೆ ತನ್ನ ತಾಯಿ ಮತ್ತು ಸಮಾಜಕ್ಕೆ ಹೇಗೆ ಇವುಗಳನ್ನೆಲ್ಲಾ ವಿವರಿಸಲಿ ಎಂಬುದು..? ತಮ್ಮ ನಂಬಿಕೆಗಳು ತಪ್ಪು ಎಂಬುದನ್ನು ಹೇಗೆ ಅವರಿಗೆ ಮನವರಿಕೆ ಮಾಡಿಕೊಡುವುದು ಎಂದು..? ಕಾಲವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬಹುದೇನೋ.

ಚಿತ್ರಕೃಪೆ : ಅವಧಿ

10 comments:

  1. ತುಂಬಾ ಚೆನ್ನಾಗಿದೆ ಜಿ :)
    ಕಟ್ಟುಪಾಡುಗಳ ಸಂಕೋಲೆ ,ಬೆಸೆಯಬೇಕಿದ್ದ ಬಂಧಗಳ ಹರಾಜು ,

    ವಾಸ್ತವದ ಅನಾವರಣ...

    ಮದುವೆ ಅನ್ನೋದೊಂದು ವ್ಯಾಪಾರ ಅನ್ನೋ ತರ ಆಗಿರೋದು ದುರಂತ ..
    ಬರಿಯ ಕಥೆಯಾಗಿ ಉಳಿದಿಲ್ಲ ಇದು...
    ಅವಳಿಗರ್ಥವಾದ ಇದೇ ಭಾವ ಎಲ್ಲರಿಗೂ ಅರ್ಥವಾಗಲಿ ಅನ್ನೋ ಆಶಯ ಇಷ್ಟ ಆಯ್ತು

    ReplyDelete
    Replies
    1. ನೀವು ಇಷ್ಟಪಟ್ಟಿದ್ದು ನನಗೆ ಖುಷಿ ಆಯ್ತು.. ಧನ್ಯವಾದಗಳು.. ಹೀಗೆಯೇ ಬರ್ತಾ ಇರಿ..

      Delete
  2. ಅಜಯ್ , ಇಂಥ ಸನ್ನಿವೇಶಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇವೆ .. ಮದುವೆ ವ್ಯಾಪಾರ ಆಗಿದೆಯೇ ಹೊರತು ಅದರಲ್ಲಿ ಯಾವುದೇ ಸಂಭಂದಗಳ ಬೆಸುಗೆ ಇಲ್ಲ .. ಇದು ವಾಸ್ತವ ಮತ್ತು ಸತ್ಯ ಕೂಡ .. ಎಲ್ಲ ಪೋಷಕರು ತಮ್ಮ ಮರ್ಯಾದೆ ಉಳಿಯುವುದು ತಮ್ಮ ಮಕ್ಕಳ ಮದುವೆಯನ್ನು ಬಹಳ ವಿಜ್ರುಂಭಣೆ ಇಂದ ಮಾಡಿದರೆ ಮಾತ್ರ ಎಂದು .. ನಮ್ಮ ಸಮಾಜ ಇಂಥ ಮನಸ್ಥಿತಿ ಇಂದ ಹೊರಬರಬೇಕಾದ ಅಗತ್ಯ ಇದೆ

    ReplyDelete
    Replies
    1. ಧನ್ಯವಾದಗಳು ಗಿರೀಶಣ್ಣ.. ಎಲ್ಲಿಯವರೆಗೂ ನಮ್ಮ ಸಮಾಜದಲ್ಲಿ ಹಣ, ಜಾತಿಗಳು ಮೌಲ್ಯವಾಗಿರುತ್ತವೆಯೋ ಅಲ್ಲಿಯವರೆಗೂ ಬದಲಾವಣೆ ಕಷ್ಟ.. ಮುಖ್ಯ ನಮ್ಮ ಸಮಾಜದ ಚಿಂತನೆಯನ್ನು ಬದಲಿಸಬೇಕಾಗಿದೆ..

      Delete
  3. ಭಾಗ್ಯ ಮತ್ತು ಗಿರೀಶ್ ತಮ್ಮ ಬರಹದ ಆಳವನ್ನು ಸರಿಯಾಗಿ ಗುರುತಿಸಿದ್ದಾರೆ. ಈಗ ಮದುವೆ ಎನ್ನುವುದು ಸುಲಿಗೆ! ಸಂಭ್ರಮಾಚರಣೆಯಲ್ಲಿ ಹೇಳಿಕೊಳ್ಳದೆ ಉಳಿದುಹೋಗುವ ನೋವ ದನಿಗಳೇಷ್ಟೋ!

    http://badari-poems.blogspot.in

    ReplyDelete
    Replies
    1. ಧನ್ಯವಾದಗಳು ಬದರಿ ಸರ್, ನಿಜ, ನೀವು ಹೇಳಿರುವಂತೆ ಮದುವೆ ಈಗ ಸುಲಿಗೆಯೇ.. ಅಲ್ಲಿ ಸಂಭ್ರಮಕ್ಕಿಂತ ಅಂತಸ್ತು, ಆಡಂಬರಗಳ ಪ್ರದರ್ಶನವೇ ಹೆಚ್ಚು.. ಇವೆಲ್ಲದರ ನಡುವೆ ಎಷ್ಟೋ ಜೀವಗಳು ನಲುಗಿ ಹೋಗುತ್ತವೆ..

      Delete
  4. ನಂಬಿರುವ ನೀತಿ ಸಿದ್ಧಾಂತಗಳನ್ನು ಆಚರಣೆಗೆ ತರುವಾಗ ತೊಡರು ಬಳ್ಳಿ ಸಹಜ. ಎಲ್ಲಿಯ ತನಕ ನಾವು ಮಾಡುವ ಕೆಲಸ ಸಮಾಜದ ಹಿತ ದೃಷ್ಟಿಯಿಂದ ಸರಿ ಅನ್ನಿಸುತ್ತೋ ಅಲ್ಲಿಯ ತನಕ ಯಾವುದೇ ಅಳುಕುಲ್ಲದೆ ಮಾಡಬಹುದು. ಆದರೆ ತಪ್ಪು ಹೆಜ್ಜೆ ಇಡಬಾರದು ಅನ್ನುವ ಭಯ ಕಾಡಬೇಕು ಅಷ್ಟೇ. ಸುಂದರ ಬರಹ ಇಷ್ಟವಾಯಿತು

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತ್ ಸರ್.. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

      Delete
  5. ನಿಜ ಗೆಳೆಯ ಕಾಲ ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತದೆ.............. :-)
    ರಘು ಸ್ನೇಹಜೀವಿ

    ReplyDelete
  6. ಧನ್ಯವಾದಗಳು ರಘು,, ಹೀಗೆಯೇ ಪ್ರೀತಿ ತುಂಬಿದ ಪ್ರೋತ್ಸಾಹವಿರಲಿ..

    ReplyDelete