Thursday, April 4, 2013


ನನ್ನ ಮೊದಲ ಚಾರಣ

ಪೂರ್ಣಚಂದ್ರ ತೇಜಸ್ವಿಯವರ ಬದುಕು, ಬರಹ, ಚಿಂತನೆಗಳ ಸಾಕಾರಕ್ಕಾಗಿ ರೂಪುಗೊಂಡ ವಿಸ್ಮಯ ಪ್ರತಿಷ್ಠಾನ ಹಲವು ಚಟುವಟಿಕೆಗಳ ಮೂಲಕ ತೇಜಸ್ವಿಯವರ ನೆನಪನ್ನು ಹಸಿರಾಗಿರಿಸಲು ಪ್ರಯತ್ನಿಸುತ್ತಿದೆ. ಅದರ ಕಾರ್ಯಚಟುವಟಿಕೆಗಳ ಭಾಗವಾಗಿ ಮಾರ್ಚ್ ೨೯ರ ಶುಕ್ರವಾರದಂದು ಮೂಡಿಗೆರೆ ಸಮೀಪದ ಕುಂದೂರಿನ ಬೇಟರಾಯನಕೋಟೆಯಲ್ಲಿ ಚಾರಣ ಏರ್ಪಡಿಸಿತ್ತು. ಆ ಚಾರಣದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿದ್ದು ಆಕಸ್ಮಿಕವಾಗಿ. ಏಕೆಂದರೆ ಬುಧವಾರದವರೆಗೆ ನನಗೆ ಆ ಚಾರಣ ಕುರಿತಾಗಲೀ, ವಿಸ್ಮಯ ಪ್ರತಿಷ್ಠಾನದ ಕುರಿತಾಗಲೀ ಏನೂ ತಿಳಿದಿರಲಿಲ್ಲ. ಬ್ಲಾಗ್ ಒಂದರಿಂದ ವಿಷಯ ತಿಳಿದು ಸಂಬಂಧಪಟ್ಟವರಿಗೆ ಕರೆ ಮಾಡಿ ಚಾರಣ ಕುರಿತು ಮಾಹಿತಿ ಪಡೆದು ಅದರಲ್ಲಿ ನಾನು ಭಾಗಿಯಾಗಲು ಹೊರಟೆ.
ನನಗೆ ಇದು ಮೊದಲ ಚಾರಣ. ಚಾರಣಕ್ಕೆ ಮನೆಯವರನ್ನು ಒಪ್ಪಿಸುವುದೇ ನನಗೆ ದೊಡ್ಡ ತಲೆನೋವಾಯಿತು. ಅಮ್ಮನನ್ನು ಸುಲಭವಾಗಿ ಒಪ್ಪಿಸಿದೆನಾದರೂ ಅಪ್ಪನನ್ನು ಒಪ್ಪಿಸಲಾಗಲಿಲ್ಲ. ಬೇಕಿದ್ದರೆ ಧರ್ಮಸ್ಥಳಕ್ಕೆ ಹೋಗು ಎಂದರು ಅಪ್ಪ. ಅವರನ್ನು ಒಪ್ಪಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೂ ಅವರು ಎಲ್ಲ ವಿವರಗಳನ್ನು ಪಡೆದು ಗಂಟೆಗೊಮ್ಮೆ ಫೋನು ಮಾಡಬೇಕೆಂದು ಷರತ್ತು ಹಾಕಿ ಒಪ್ಪಿದರು. ನಾನು ಕಡೂರು ಬಿಟ್ಟಾಗ ಬೆಳಗ್ಗಿನ ಜಾವ ೪ ಗಂಟೆ. ಹುಣ್ಣಿಮೆ ಕಳೆದು ಆಗಷ್ಟೆ ಎರಡು ದಿನವಾಗಿತ್ತು. ಮೂಡಿಗೆರೆಗೆ ಹೋಗುತ್ತಿದ್ದದ್ದು, ತಲೆತುಂಬಾ ತೇಜಸ್ವಿಯವರು ತುಂಬಿಕೊಂಡಿದ್ದರಿಂದ ನಿದ್ದೆ ಬಂದಿರಲಿಲ್ಲ. ತಿರುವುಗಳು ತುಂಬಿದ ದಾರಿಯುದ್ದಕ್ಕೂ ಚಂದಿರ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಕಿಟಕಿಯಾಚೆ ಒಮ್ಮೆ ಅತ್ತ ಸರಿದು ಕಣ್ಮರೆಯಾಗುತ್ತಿದ್ದರೆ, ಇನ್ನೊಮ್ಮೆ ಇತ್ತ ಬಂದು ದರ್ಶನ ನೀಡುತ್ತಿದ್ದ. ೭ ಗಂಟೆಗೆ ಮೂಡಿಗೆರೆ ತಲುಪಬೇಕಿದ್ದ ನಾನು ೬ ಗಂಟೆಗೇ ಅಲ್ಲಿ ಹಾಜರಿ ಹಾಕಿದ್ದೆ. ವಿವಿಧೆಡೆಗಳಿಂದ ಚಾರಣಪ್ರಿಯರು, ಆಸಕ್ತರು, ಪ್ರಕೃತಿಪ್ರಿಯರು ಅಲ್ಲಿಗೆ ಬಂದಿದ್ದರು. ದೂರದೂರುಗಳಿಂದ ಹಲವರು ಬರಬೇಕಿದ್ದರಿಂದ ಚಾರಣಕ್ಕೆ ಹೊರಡುವುದು ಸ್ವಲ್ಪ ತಡವಾಯಿತು. ಒಟ್ಟು ೪೬ ಜನರಿದ್ದ ನಮ್ಮ ತಂಡ ಮೂರು ಜೀಪುಗಳಲ್ಲಿ ಮೂಡಿಗೆರೆಯಿಂದ ಸುಮಾರು ೨೦ ಕಿ.ಮೀ ದೂರವಿದ್ದ ಕುಂದೂರಿಗೆ ಹೊರಟೆವು. ಅದು ನಮ್ಮ ಚಾರಣ ಶುರುವಾಗುವ ಸ್ಥಳ. ಅಲ್ಲಿ ಎಲ್ಲರೂ ತಿಂಡಿ ತಿಂದು ತಮ್ಮ-ತಮ್ಮ ಪರಿಚಯ ಮಾಡಿಕೊಂಡು ಮಧ್ಯಾಹ್ನದ ಊಟವನ್ನು ಕಟ್ಟಿಟ್ಟು ಬ್ಯಾಗನಲ್ಲಿರಿಸಿಕೊಂಡು ಹೊರಟೆವು.
ಮೂಡಿಗೆರೆಯೆಂದ ಕೂಡಲೇ ಕಣ್ಮುಂದೆ ಬರುವುದು ದಾರಿಯುದ್ದಕ್ಕೂ ಅಕ್ಕಪಕ್ಕದಲ್ಲಿ ಹಬ್ಬಿರುವ ಕಾಫಿ ತೋಟಗಳು. ಹೂಮಳೆಯ ನಿರೀಕ್ಷೆಯಲ್ಲಿದ್ದ ಕಾಫಿತೋಟಗಳು ನಮಗೆ ಮೊದಲು ಇದಿರಾದವು. ಅದರ ನಡುವೆ ನಡೆದು ನಾವು ಹತ್ತಬೇಕಿದ್ದ ಬೇಟರಾಯನಕೋಟೆಯ ಬುಡದವರೆಗೂ ಬಂದೆವು. ದಾರಿ ಸವೆಯುತ್ತ  ಹಲವರು ಪರಿಚಿತರಾದರು. ಹೀಗೆಯೇ ಪರಸ್ಪರ ಪರಿಚಯಿಸಿಕೊಳ್ಳುತ್ತಾ ಒಬ್ಬರ ಹಿಂದೆ ಒಬ್ಬರು ಸಣ್ಣ ಕಾಲುದಾರಿಯಲ್ಲಿ ಸಾಗುತ್ತಿರಬೇಕಾದರೆ ಅದೆಲ್ಲಿತ್ತೋ ಏನೋ? ನಮ್ಮ ನಡುವಿನಿಂದ ನವಿಲೊಂದು ಹಾರಿ ಹೋಯಿತು. ಎಲ್ಲರೂ ಅಲ್ಲಿ ಇಲ್ಲಿ ಎನ್ನುವಷ್ಟರಲ್ಲಿ ಕಾಡಿನಲ್ಲಿ ಮರೆಯಾಗಿ ಹೋಯಿತು. ಮೃಗಾಲಯದಲ್ಲಿ ಸರಳುಗಳ ನಡುವೆ ತನ್ನಷ್ಟಕ್ಕೆ ತಾನಿದ್ದುಕೊಂಡು ಹೋಗಿಬರುವವರಿಗೆಲ್ಲಾ ಫೋಸು ಕೊಡುತ್ತಿದ್ದ ನವಿಲು ಈ ಕಾಡಿನ ಮೌನವನ್ನು ಸೀಳಿ ನಮ್ಮ ನಡುವಿನಿಂದಲೇ ಹಾರಿ ಮರೆಯಾದಾಗ ಉಂಟಾದ ರೋಮಾಂಚನ ಅಷ್ಟಿಷ್ಟಲ್ಲ. ನವಿಲು ಅಷ್ಟು ದೂರ ಹಾರಬಹುದೆಂದು ನಾನಂತೂ ಊಹಿಸಿರಲಿಲ್ಲ. ಗಂಡು ನವಿಲು ಕುಣಿಯುವ ನವಿಲಾದ್ದರಿಂದ ಅದು
ಹೆಣ್ಣು ನವಿಲೇ ಇರಬೇಕೆಂದು ನಮ್ಮ ಜೊತೆ ಬಂದಿದ್ದವರೊಬ್ಬರು ತಿಳಿಸಿದರು. ಅಲ್ಲಿಂದ ಹಾಗೆಯೇ ನಡೆಯುತ್ತಿರಬೇಕಾದರೆ ಝರಿಯೊಂದರ ಮೂಲವಿರಬಹುದಾದ ಮರಗಳ ಬೇರುಗಳು ತುಂಬಿಕೊಂಡಿದ್ದ ಸಣ್ಣ ಬಿಲದಂತಹ ಸ್ಥಳದಿಂದ ಸಣ್ಣಗೆ ನೀರು ತೊಟ್ಟಿಕ್ಕುತ್ತಿತ್ತು. ತೇಜಸ್ವಿಯವರು ಹುಡುಕಿದ್ದ ಝರಿಯ ಮೂಲ ಇದೇ ತೆರನದ್ದಾಗಿರಬಹುದೆಂದು ಊಹಿಸಿದೆ. (ನನ್ನ ಹಿಂದಿನ ಪೋಸ್ಟ್ ನೋಡಿ). ಸ್ವಲ್ಪ ಮುಂದೆ ನಡೆದು ಅಲ್ಲಿಯೇ ಇದ್ದ ಬಯಲಿನಂತಹ ಪ್ರದೇಶದಲ್ಲಿ ಸ್ವಲ್ಪ ಹೊತ್ತು ನಿಂತೆವು. ಆಗಲೇ ಅರ್ಧದಷ್ಟು ಬೆಟ್ಟ ಹತ್ತಿದ್ದರಿಂದ ಸುತ್ತಲ ಪಶ್ಚಿಮಘಟ್ಟದ ಪರ್ವತಶ್ರೇಣಿಗಳು ಕಾಣಿಸಿ ಕ್ಯಾಮರಾಗಳಿಗೆ ರೂಪದರ್ಶಿಗಳಾಗಿದ್ದವು.
ನಾವು ಹತ್ತಬೇಕಿರುವ ಪರ್ವತ ನಾವು ನಡೆಯುತ್ತಿದ್ದ ದಾರಿಯಲ್ಲಿ ನಮ್ಮ ಹಿಂದೆ ಬಂದು ನನಗೆ ಗೊಂದಲವನ್ನುಂಟು ಮಾಡಿದವು. ನಾವು ಹತ್ತಬೇಕಿರುವುದು ಬೇರೆ ಯಾವುದೋ ಪರ್ವತವಿರಬೇಕೆಂದುಕೊಂಡೆ. ಅಲ್ಲಿಯೇ ಒಬ್ಬರನ್ನು ವಿಚಾರಿಸಿದಾಗ ನನ್ನ ಊಹೆ ಸುಳ್ಳಾಯಿತು. ಬೆಟ್ಟವ
ನ್ನು ಸುತ್ತಿಕೊಂಡು ಹತ್ತುತ್ತಿದುದ್ದರಿಂದ ಆ ರೀತಿ ನನಗೆ ಅನಿಸಿತ್ತು. ನಮ್ಮ ಜೊತೆ ದಾರಿ ತೋರಿಸಲು ಅಲ್ಲಿನ ಸ್ಥಳೀಯರು ಚಂದ್ರಯ್ಯ, ಮಲ್ಲಯ್ಯ ಎನ್ನುವವರು ಬಂದಿದ್ದರು. ಒಬ್ಬರು ಮುಂದೆ ದಾರಿ ತೋರಿಸುತ್ತಾ ಹೋದರೆ, ಇನ್ನೊಬ್ಬರು ಕೊನೆಯಲ್ಲಿದ್ದುಕೊಂಡು ಯಾರೂ ಕೂಡ ದಾರಿತಪ್ಪದಂತೆ ನಿಗಾ ವಹಿಸಿದ್ದರು. ಅವರು ಕರೆದುಕೊಂಡ ದಾರಿ ಸುತ್ತುಬಳಸಿ ಎನಿಸಿದರೂ ಒಂದಿನಿತು ಸುಸ್ತಾಗಲಿಲ್ಲ. ನಾವೇ ದಾರಿಯನ್ನು ಮಾಡಿಕೊಂಡು ಹೊರಟಿದ್ದರೆ ಅರ್ಧ ಹತ್ತುವಷ್ಟರಲ್ಲಿ ಸುಸ್ತಾಗಿ ಕುಳಿತುಕೊಳ್ಳಬೇಕಿತ್ತು. ಆದರೆ ಶುರುವಿನಲ್ಲಿ ಶಿಖರ ನೋಡಿ ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದಿದ್ದವರು ಕೂಡ  ಏನೂ ಮಾತನಾಡದೆ ಆರಾಮಾಗಿಯೇ ಹತ್ತಿದ್ದರು.
ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ, ನಮಗೆಂದೇ ಜೀವಾಳರವರು ತಂದಿದ್ದ ಕಾಡುಜಾತಿಯ ಹಣ್ಣೊಂದನ್ನು ಚಪ್ಪರಿಸಿ ಆ ಬಯಲಿನಂತಹ ಪ್ರದೇಶದಿಂದ ಹೊರಟೆವು. ಸ್ವಲ್ಪ ಮೇಲೆ ಹತ್ತಿದಾಗ ನಮ್ಮ ಜೊತೆ ಬಂದಿದ್ದವರೊಬ್ಬರು ಮರವೊಂದರ ತೊಗಟೆಯಿಂದ ವಿಚಿತ್ರ ಕೀಟವೊಂದನ್ನು ತೆಗೆದು ತೋರಿಸಿದರು. ನೋಡಲು ಥೇಟ್ ಕಡ್ಡಿಯಂತೆಯೇ ಇದ್ದ ಆ ಕೀಟವನ್ನು ಅದು ಹೇಗೆ  ಗುರುತಿಸಿದ್ದರೋ ನನಗಂತೂ ಗೊತ್ತಿಲ್ಲ. ಆ ಕೀಟವನ್ನು ಕೈಯಲ್ಲಿ ಹಿಡಿದುಕೊಂಡು ತೋರಿಸುತ್ತಾ ಅದರ ಅಂಗರಚನೆಯನ್ನು ವಿವರಿಸಿದರು. ಜೀವಿಗಳು ಪ್ರಕೃತಿಯೊಡನೆ ನಿರಂತರವಾಗಿ ನಡೆಸಿಕೊಂಡು ಬಂದಿರುವ ಹೊಂದಾಣಿಕೆಯನ್ನು ನೋಡಿ ಸೋಜಿಗವಾಯಿತು. ಇಂತಹ ಕೀಟಗಳು ನಮ್ಮ ನಡುವೆಯೇ ಸಾಕಷ್ಟು ಇರಬಹುದಾದರೂ ಅದನ್ನು ನೋಡಿ ಗುರುತಿಸಿ ಅದರ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಎಷ್ಟನ್ನು ಇದೇ ರೀತಿ ನಾವು ಕಣ್ಣಿಗೆ ಕಂಡರೂ ನೋಡದೇ ಬಿಟ್ಟಿದ್ದೇವೋ ಏನೋ..?
ತುದಿ ತಲುಪಿ ನೋಡಿದಾಗ ಸುತ್ತಲೂ ಅಲೆಅಲೆಗಳಂತೆ ದಿಗಂತದವರೆಗೂ ಹಬ್ಬಿ ಹಸಿರುಹೊದ್ದು ನಿಂತಿರುವ ಪರ್ವತ ಸಾಲುಗಳು. ಮತ್ತೆ ಒಂದಷ್ಟು ಫೋಟೋಗಳು. ನಮ್ಮ ಜೊತೆ ಬಂದಿದ್ದ ಹಿರಿಯರು ತಾವು ಈ ಮುಂಚೆ ಚಾರಣ ಮಾಡಿದ್ದ ಪರ್ವತಗಳನ್ನು ಅಲ್ಲಿಂದಲೇ ತೋರಿಸಿ ಉಳಿದಿರುವುದನ್ನು ಲೆಕ್ಕ ಹಾಕಿ ಆದಷ್ಟು ಬೇಗ ಅವುಗಳನ್ನು ಏರಬೇಕೆಂದುಕೊಳ್ಳುತ್ತಿದ್ದರು. ಅವರ ಉತ್ಸಾಹಕ್ಕೊಂದು ಸಲಾಂ. ಅಲ್ಲಿಂದ ಮಾತುಗಳು ತಮ್ಮ ಹಿಂದಿನ ನೆನಪುಗಳು, ಬದಲಾದ ಕಾಲಮಾನ, ವ್ಯವಸ್ಥೆಯಲ್ಲಿನ ದೋಷ,ಅವುಗಳೆಡೆಗಿನ ಆಕ್ರೋಶ, ಮುಂದಿನ ಯೋಜನೆಗಳತ್ತ ಹೊರಳುತ್ತಿತ್ತು. ಆಗಲೇ ಊಟದ ಸಮಯವಾಗಿದ್ದರಿಂದ ಬೇರೆ ದಾರಿಯಲ್ಲಿ ಇಳಿಯುತ್ತ ನೀರು
ಇರುವಂತಹ ಜಾಗಕ್ಕೆ ಬಂದು ಕುಳಿತೆವು. ಸುತ್ತಲೂ ಬೇರೆ ಯಾವುದು ನೀರಿನ ಮೂಲ ಇರಲಿಲ್ಲವೆಂದೇನೋ ಅಲ್ಲಿಗೆ ಸಾಕಷ್ಟು ಪ್ರಾಣಿಗಳು ಬಂದಿದ್ದರಿಂದ ಅವುಗಳ ಹೆಜ್ಜೆಗುರುತುಗಳಿದ್ದವು. ಕಟ್ಟಿಕೊಂಡು ಬಂದಿದ್ದ ಪಲಾವ್, ಮೊಸರನ್ನ ತಿಂದು ಒಂದಷ್ಟು ಕಾಲ ಹರಟಿ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ಬ್ಲಾಗ್‍ಗಳ ಬಗ್ಗೆ, ನಾಟಕಗಳ ಬಗ್ಗೆ, ಒಂದಷ್ಟು ಸಿನಿಮಾಗಳ ಬಗ್ಗೆ ಚರ್ಚೆ ನಡೆಯಿತು. ಸುಮ್ಮನೆ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತ ನಡೆದು ಬಂದೆ. ಕಾಫಿ ತೋಟದ ಅಂಚಿಗೆ ಜೀಪುಗಳು ಬಂದು ಅಲ್ಲಿಂದ ನಮ್ಮನ್ನು ಕರೆದುಕೊಂಡು ಹೊರಟಿತು. ಅಲ್ಲಿಂದ ಕಾಫಿ ಕಾರ್ನರ್‍‍ಗೆ ತೆರಳಿ ಕಾಫಿ ಹೀರಿ ಮೂಡಿಗೆರೆಗೊಂದಷ್ಟು ಜನ, ಕೊಟ್ಟಿಗೆಹಾರಕ್ಕೊಂದಷ್ಟು ತೆರಳಿ ತಮ್ಮ ತಮ್ಮ ಊರುಗಳಿಗೆ ಹೊರಟರು.
ಮೂಡಿಗೆರೆಯಲ್ಲಿ ಬಸ್ಸು ಹತ್ತಿ ವಾಪಾಸ್ ಬರುತ್ತಿದ್ದಾಗ ಚಾರಣದ ಸಮಯದಲ್ಲಿ ಜೀವಾಳರವರು ಆಡಿದ್ದ ಮಾತುಗಳು ನೆನಪಿಗೆ ಬಂದವು. "ಈ ಇಡೀ ಜಗತ್ತಿನಲ್ಲಿ ನಾವು ಈಗ ಇರುವ ಜಾಗ ಒಂದು ಸಣ್ಣ ಚುಕ್ಕಿಯಷ್ಟಿರಬಹುದು. ಈ ಸಣ್ಣ ಚುಕ್ಕಿಯೇ ಇಷ್ಟೊಂದು ಅಚ್ಚರಿಯನ್ನು, ವಿಸ್ಮಯವನ್ನು ಮೂಡಿಸಬಹುದಾದರೆ ಇರಬಹುದಾದರೆ ಇನ್ನು ಇಡೀ ಭೂಮಿ, ಅದರಾಚೆಗಿನ ಬ್ರಹ್ಮಾಂಡ ಇನ್ನೇನೇನನ್ನೂ ತನ್ನೊಳಗೆ ಅಡಗಿಸಿಕೊಂಡಿರಬಹುದು."  ಸುಮ್ಮನೆ ಯೋಚಿಸುತ್ತಾ ಕುಳಿತೆ.