Thursday, May 2, 2013


ದಾರಿ ಯಾವುದಯ್ಯಾ ಅಭಿವೃದ್ಧಿಗೆ..?


ಕರ್ನಾಟಕದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿ ಸುಮಾರು ಒಂದೂವರೆ ತಿಂಗಳು ಕಳೆದಿದೆ. ಹೈಕಮಾಂಡ್ ಮುಂದೆ ಹಲ್ಲುಗಿಂಜಿ ಜಾತಿ ಅಥವಾ ಹಣಬಲದಿಂದ ಟಿಕೆಟ್ ಪಡೆದು, ಸಿಗದೆ ಹೋದರೆ ಇನ್ನೊಂದು ಪಕ್ಷಕ್ಕೆ ಜಿಗಿದು ಅಲ್ಲಿಂದ ಟಿಕೆಟ್ ಗಿಟ್ಟಿಸಿ ನಾಮಪತ್ರ ಸಲ್ಲಿಸಿ, ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿದ್ದಾರೆ, ನಮ್ಮನ್ನಾಳುವ ಕನಸು ಹೊತ್ತಿರುವ ರಾಜಕಾರಣಿಗಳು. ಅವರೆಲ್ಲರ ಗುರಿ ಒಂದೇ, ಹೇಗಾದರು ಸರಿ ಗೆದ್ದು ವಿಧಾನಸೌಧ ಪ್ರವೇಶಿಸಿ ಸಾಧ್ಯವಾದ ಮಟ್ಟಿಗೆ ಬಾಚಿಕೊಳ್ಳುವುದು.

ಆಡಳಿತ ಪಕ್ಷ ಮತ್ತು ವಿಪಕ್ಷಗಳ ಪ್ರಚಾರಕಾರ್ಯಗಳಲ್ಲಿ ಸಮಾನವಾಗಿ ಆದರೆ ಬೇರೆ ಬೇರೆ ಹಿನ್ನೆಲೆಯಲ್ಲಿ ಕೇಳಿಬರುತ್ತಿರುವ ಶಬ್ದ "ಅಭಿವೃದ್ಧಿ". ನಮ್ಮ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ ಎಂದು ಆಡಳಿತ ಪಕ್ಷದವರು ಹೇಳಿದರೆ ಇವರ ಕಾಲದಲ್ಲಾದದ್ದು ಕೇವಲ ಸ್ವಂತದ ಅಭಿವೃದ್ಧಿಯೆಂಬುದು ವಿಪಕ್ಷಗಳ ಕೂಗು. ಇನ್ನು ಕೇಂದ್ರದಿಂದ, ಬೇರೆ ರಾಜ್ಯಗಳಿಂದ ಬಂದವರು ಕೂಡ ಅಭಿವೃದ್ಧಿಯ ಮಂತ್ರ ಜಪಿಸಿದವರೇ. ಹಾಗಾದರೆ ಕರ್ನಾಟಕದಲ್ಲಾಗಿರುವ ಅಭಿವೃದ್ಧಿ ಯಾವ ಸ್ವರೂಪದ್ದು? ನಿಜವಾದ ಅಭಿವೃದ್ಧಿಯ ಮಾನದಂಡಗಳೇನು? ನಾವು ಸಾಗಬೇಕಿರುವ ಅಭಿವೃದ್ಧಿಯ ಪಥ ಯಾವುದು?

ಸರಾಸರಿ ವರಮಾನ ಏರಿಕೆ, ಕೃಷಿ ಮತ್ತು ಕೈಗಾರಿಕೆಗಳ ಉತ್ಪಾದನೆಯಲ್ಲಿ ಉನ್ನತಮಟ್ಟ ಸಾಧಿಸುವುದು, ಬದಲಾಗುತ್ತಿರುವ ವಿಙ್ಞಾನ ತಂತ್ರಙ್ಞಾನವನ್ನು ಅಳವಡಿಸಿಕೊಳ್ಳುವುದು, ಉದ್ಯೋಗಗಳು ಅಧಿಕವಾಗುವುದು, ಸಮಾಜ ಆಧುನೀಕರಣಗೊಳ್ಳುವುದು, ೪-೮ ಲೇನಿನ ರಸ್ತೆಗಳು ನಿರ್ಮಾಣಗೊಳ್ಳುವುದು, ದಾಖಲೆ ಗಾತ್ರದ ಬಜೆಟ್ ಮಂಡಿಸುವುದು.. ಇವಿಷ್ಟೇ ಅಭಿವೃದ್ಧಿಯ ಮಾನದಂಡಗಳಲ್ಲ. ಏಕೆಂದರೆ ಸರಾಸರಿ ವರಮಾನ ಏರಿಕೆಯಾಗುತ್ತಿದ್ದರೂ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಬೆಳೆಯುತ್ತಿದೆ. ಉತ್ಪಾದನೆಯಲ್ಲಿ ಉನ್ನತ ಮಟ್ಟ ಸಾಧಿಸಲು ಕೈಗಾರಿಕೆಗಳು ಹಿಡಿದಿರುವ ದಾರಿ ಪರಿಸರದ ದೃಷ್ಟಿಯಿಂದ ಮಾರಕ. ೪-೮ ಲೇನಿನ ರಸ್ತೆಗಳು ಹಾದುಹೋಗಿರುವುದು ಸಾವಿರಾರು ರೈತರ ಸಮಾಧಿಯ ಮೇಲೆ. ಯೋಜನಾವೆಚ್ಚಗಳಿಗಿಂತ ಯೋಜನೇತರ ವೆಚ್ಚಗಳೇ ಜಾಸ್ತಿ ಇರುವ ದಾಖಲೆ ಗಾತ್ರದ ಬಜೆಟ್‍ನಿಂದ ಯಾವ ಉಪಯೋಗವೂ ಇಲ್ಲ. ಈಗಲೂ ಬಡತನ, ಹಸಿವು, ಅನಕ್ಷರತೆ, ಅಸಮಾನತೆ, ಮಾನವ ಹಕ್ಕುಗಳ ಉಲ್ಲಂಘನೆ ಜನರನ್ನು ಕಾಡುತ್ತಲೆ ಇದೆ. ಪರಿಸರದ ದೃಷ್ಟಿಯಿಂದ ಅಭಿವೃದ್ಧಿಯನ್ನು ಪರಿಭಾವಿಸಿಕೊಂಡರೆ ಕಣ್ಣೆದುರು ಅಭಿವೃದ್ಧಿಯ ನಾನಾ ವಿಕೃತ ಮುಖಗಳು ನರ್ತನ ಮಾಡುತ್ತವೆ. ಸರಕು, ಸಾಮಾಗ್ರಿ, ವರಮಾನ, ಉದ್ಯೋಗ, ತಂತ್ರಙ್ಞಾನ,ಬಂಡವಾಳ ಮುಂತಾದವು ಅಭಿವೃದ್ಧಿಯ ಸಾಧನಗಳೇ ಹೊರತು ಅವುಗಳ ವರ್ಧನೆಯೇ ಅಭಿವೃದ್ಧಿಯಲ್ಲ. ಇಲ್ಲಿ ದುಡಿಮೆಗಾರರ ಬದುಕು, ಅವರ ಬವಣೆ, ಅವರ ಬೆವರು, ಅವರ ಹಕ್ಕುದಾರಿಕೆ ಮುಂತಾದ ಸಂಗತಿಗಳಿಂದ ಅಭಿವೃದ್ಧಿಯನ್ನು ಅಳೆಯುತ್ತಿಲ್ಲ. ಅಭಿವೃದ್ಧಿ ಜನರನ್ನು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಒಳಗೊಳ್ಳುವ ಪ್ರಕ್ರಿಯೆಯಾಗಬೇಕು.ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನು ವಿವರಿಸುವ ಒಂದೆರಡು ಉದಾಹರಣೆಗಳು ಇಲ್ಲಿವೆ.
ಮಹಿಳಾ ಅಭಿವೃದ್ಧಿ ಯೋಜನೆಗಳು:
"ಎಲ್ಲಿ ನಾರಿಯರು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ" ಎಂದು ನಂಬಿಕೊಂಡು ಬಂದ ದೇಶ ನಮ್ಮದು. ಆದರೆ ಇತಿಹಾಸವನ್ನು ಗಮನಿಸಿದರೆ ಎಲ್ಲ ವರ್ಗಗಳಲ್ಲಿಯೂ ಅತಿ ಹೆಚ್ಚು ಶೋಷಿತರಾದವರು ಮಹಿಳೆಯರೇ. ಅವರ ಬದುಕನ್ನು ಹಸನಾಗಿಸಲು ಹಾಕಿಕೊಂಡ ಯೋಜನೆಗಳು ಕಡಿಮೆಯೇನಲ್ಲ. ಆದರೆ ಅವುದಳು ಮಹಿಳೆಯರನ್ನು ಹೇಗೆ ಪರಿಭಾವಿಸಿಕೊಂಡಿದೆ ಎಂಬುದು ಮುಖ್ಯವಾಗುತ್ತದೆ. ಮಹಿಳಾ ಅಭಿವೃದ್ಧಿ ಯೋಜನೆಗಳು ಎರಡು ಬಗೆಯದ್ದು. ಮಹಿಳೆಯರ ದೈನಂದಿನ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳು ಒಂದು ಬಗೆಯದ್ದಾದರೆ ಮಹಿಳೆಯರ ಸಂಘರ್ಷಣಾತ್ಮಕ ಅಗತ್ಯಗಳನ್ನು ಪೂರೈಸುವ ಕಾರ್ಯಕ್ರಮಗಳು ಇನ್ನೊಂದು ಬಗೆಯದ್ದು. ಬಾಲಕಿಯರಿಗೆ ಸೈಕಲ್ಲು, ಭಾಗ್ಯಲಕ್ಷ್ಮಿ, ಜನನಿ, ಮಡಿಲು ಮುಂತಾದ ಕಾರ್ಯಕ್ರಮಗಳು ಮೊದಲ ಬಗೆಯದ್ದು. ಇವುಗಳನ್ನು ಆಚರಣೆಗೆ ತರಲು ಸಮಾಜ ಅಥವಾ ಕುಟುಂಬ ವ್ಯವಸ್ಥೆಗಳಲ್ಲಿ ಯಾವುದೇ ಬದಲಾವಣೆ ತರಬೇಕಾಗಿಲ್ಲ. ಆಸ್ತಿಯಲ್ಲಿ ಹಕ್ಕು, ಕೌಟುಂಬಿಕ ದುಡಿಮೆಯನ್ನು ಪುರುಷ ಸದಸ್ಯರು ಹಂಚಿಕೊಳ್ಳುವುದು, ಲಿಂಗಸಂಬಂಧಿ ಶ್ರಮವಿಭಜನೆಯನ್ನು ತಿರಸ್ಕರಿಸುವುದು, ಅವರಂದಕೊಂಡಂತಾಗಲು ಅಗತ್ಯವಾದ ಅವಕಾಶಗಳನ್ನು, ಸಾಮರ್ಥ್ಯವನ್ನು ಒದಗಿಸುವುದು, ವ್ಯಕ್ತಿಯಾಗಿ ನೋಡುವುದು, ದೈಹಿಕ ಸಮಗ್ರತೆ ಮತ್ತು ಸಂತಾನೋತ್ಪತ್ತಿಯ ಹಕ್ಕು ಇವೇ ಮೊದಲಾದವುಗಳು ಮಹಿಳೆಯರ ಸಂಘರ್ಷಣಾತ್ಮಕ ಅಗತ್ಯಗಳನ್ನು ಪೂರೈಸುತ್ತವೆ. ಇವುಗಳನ್ನು ಆಚರಣೆಗೆ ತರಲು ಸಮಾಜ ಅಥವಾ ಕುಟುಂಬ ವ್ಯವಸ್ಥೆಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಬೇಕಾಗುತ್ತದೆ. ಮೊದಲನೆಯ ರೀತಿಯ ಕಾರ್ಯಕ್ರಮಗಳು ಮಹಿಳೆಯರ ಬದುಕನ್ನು ಸಹ್ಯಗೊಳಿಸಬಹುದೇ ಹೊರತು ಸಮೃದ್ಧಗೊಳಿಸುವುದಿಲ್ಲ. ಮಹಿಳೆಯರು ಸ್ವತಂತ್ರ ವ್ಯಕ್ತಿಗಳಾಗಿ ತಮ್ಮ ಬದುಕನ್ನು ತಾವು ಪರಿಭಾವಿಸಿಕೊಂಡಂತೆ ರೂಪಿಸಿಕೊಳ್ಳಲು, ಕಟ್ಟಿಕೊಳ್ಳಲು ಅಗತ್ಯವಾದ ಸ್ವಾತಂತ್ರ್ಯ ಮತ್ತು ಸಾಮರ್ಥ್ಯಗಳಾನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ.

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ:
ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ನಡೆಸಿರುವ ಘೋರ ಅತ್ಯಾಚಾರದ ಪರಿಣಾಮವನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಕೆಟ್ಟ ಮೇಲೂ ಸಹ ನಮಗೆ ಇನ್ನೂ ಬುದ್ಧಿ ಬಂದಿಲ್ಲ. ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮವೆನಿಸಿರುವ ಅನೇಕ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ತೀರ ಇತ್ತೀಚೆಗೆ ದ.ಕ ಜಿಲ್ಲೆಯ ಮಂಗಳೂರ ತಾಲ್ಲೂಕಿನ ನಿಡ್ಡೋಡಿಯಲ್ಲಿ ದೇಶದಲ್ಲಿಯೇ ಅತಿದೊಡ್ಡದೆನಿಸಿರುವ ೪೦೦೦ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಸದ್ದಿಲ್ಲದೆ ಸಿದ್ಧತೆಗಳನ್ನು ನಮ್ಮ ಸರ್ಕಾರಗಳು ನಡೆಸಿವೆ. ಪಶ್ಚಿಮಘಟ್ಟಕ್ಕೆ ತೀರ ಸಮೀಪವಿರುವ ನಿಡ್ಡೋಡಿಯಲ್ಲಿ ಈ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಸ್ಥಾಪನೆಯಾದರೆ ಪಶ್ಚಿಮಘಟ್ಟದ ಮೂಲಸೆಲೆಗೆ ಕೊಡಲಿಯೇಟು ಬೀಳುವುದು ಖಂಡಿತ. ಯೋಜನಾ ಪ್ರದೇಶದ ಹತ್ತಾರು ಮೈಲು ಸುತ್ತಳತೆಯಲ್ಲಿ ಕೃಷಿ, ಹೈನುಗಾರಿಕೆ, ತೋಟಗಾರಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳುತ್ತವೆ. ಅದೇ ರೀತಿಯಲ್ಲಿ ಪಶ್ಚಿಮಘಟ್ಟದ ಕಾಡುಗಳನ್ನು ನುಂಗಿಹಾಕುವ ಗುಂಡ್ಯ ಜಲವಿದ್ಯುತ್ ಯೋಜನೆಗೆ ಮರುಜೀವ ಬರುವ ಸಾಧ್ಯತೆಗಳಿವೆ. ಗಾಡ್ಗೀಳ್ ಸಮಿತಿ ಕೆಂಪು ನಿಶಾನೆ ತೋರಿದ್ದ ಈ ಯೋಜನೆಗೆ ಕಸ್ತೂರಿ ರಂಗನ್ ನೇತೃತ್ವದ ಉನ್ನತ ಸಮಿತಿ ಹೊಸದಾರಿಯನ್ನು ತೋರಿಸಿದೆ. ತೀರಾ ಹಳೆಕಾಲದ, ಅದಕ್ಷ, ಕಳಪೆ, ಅಪಾಯಕಾರಿ ಹಾಗೂ ದುಬಾರಿ ಎನಿಸಿರುವ ಈ ವಿಧಾನಗಳು ಮುಂದಿನ ಪೀಳಿಗೆಗೆ ಹೆಚ್ಚಿನ ಹೊರೆಯನ್ನು ಹೇರುತ್ತವೆ. ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಹೊಸಹೊಸ ಅವಕಾಶಗಳು ತೆರೆದುಕೊಳ್ಳುತ್ತಿರುವ ಈ ತಂತ್ರಙ್ಞಾನ ಯುಗದಲ್ಲಿ ಈಗಲೂ ನೂರಾರು ವರ್ಷಗಳ ಕಾಲದ ಹಳೆಯ ವಿಧಾನವನ್ನೇ ಬಳಸುತ್ತಿರುವುದು ಮೂರ್ಖತನವಲ್ಲದೇ ಮತ್ತಿನ್ನೇನು..? ದಂಡಿಯಾಗಿ ಬೀಳುವ ಸೌರಶಕ್ತಿಯನ್ನು, ಬೀಸುವ ಗಾಳಿಯನ್ನು, ಜೈವಿಕ ದ್ರವ್ಯಗಳನ್ನು, ಕೃಷಿತ್ಯಾಜ್ಯಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಬಹುದು. ಹೀಗೆ ಕೌಟುಂಬಿಕ ಮಟ್ಟದಲ್ಲಿ ವಿಕೇಂದ್ರಿಕೃತ ವಿಧಾನಗಳಿಂದ ಊರಲ್ಲಿ, ಮನೆಮನೆಗಳಲ್ಲಿ ವಿದ್ಯುತ್ ಉತ್ಪಾದಿಸಿ ತಮ್ಮ ಬೇಡಿಕೆಗಳನ್ನು ಪೂರೈಸಿಕೊಂಡು ಉಳಿದಿದ್ದನ್ನು ಗ್ರಿಡ್‍ಗೆ ಸೇರಿಸಬಹುದು. ಈ ರೀತಿಯ ತಂತ್ರಙ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ ಚೈತನ್ಯ ಕಳೆದುಕೊಂಡು ನಲುಗಿ ಹೋಗಿರುವ ಗ್ರಾಮೀಣ ಜನತೆಯ ಮೊಗದಲ್ಲಿ ತುಸು ನಗುವಾದರೂ ಕಾಣಬಹುದು. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿದೆ.

ಶಿಕ್ಷಣ ವ್ಯವಸ್ಥೆ ಮತ್ತು ಭಾಷಾ ಮಾಧ್ಯಮ:
ನಾಡಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಅಲ್ಲಿನ ಶಿಕ್ಷಣ ವ್ಯವಸ್ಥೆ. ದೇಶದ ಭವಿಷ್ಯವೆನಿಸಿಕೊಂಡಿರುವ ಮಕ್ಕಳಿಗೆ ಬದುಕಲು ಅಗತ್ಯವಾದ ಕೌಶಲ್ಯಗಳನ್ನು ಕಲಿಸಿ ಜವಾಬ್ದಾರಿಯುಳ್ಳ ನಾಗರೀಕರನ್ನಾಗಿ ರೂಪಿಸುವುದೇ ಶಿಕ್ಷಣ ವ್ಯವಸ್ಥೆ. ಅದರ ಅಂಗಗಳು ಮೂಲಭೂತ ಸೌಲಭ್ಯಗಳು ಮತ್ತು ಶೈಕ್ಷಣಿಕ ವಿಚಾರಗಳು. ನಮ್ಮ ಸರ್ಕಾರ ನಡೆಸುವ ಶಾಲೆಗಳಲ್ಲಿ ಸರಿಯಾದ ಕಟ್ಟಡಗಳಿಲ್ಲ, ಶೌಚಾಲಯಗಳಿಲ್ಲ, ಗ್ರಂಥಾಲಯಗಳಿಲ್ಲ, ಆಟದ ಮೈದಾನಗಳಿಲ್ಲ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರಿಲ್ಲ, ಕೊನೆಗೆ ಅಲ್ಲಿ ವಿದ್ಯಾರ್ಥಿಗಳೇ ಇಲ್ಲ. ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಿದ್ದ ಸರ್ಕಾರವೇ ಮುಂದೆ ನಿಂತು ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಈಗಾಗಲೇ ಜನರಿಗೆ ಆವರಿಸಿರುವ ಇಂಗ್ಲೀಷ್ ಭೂತವು ನಮ್ಮ ನಾಯಕರಿಗೂ ಆವರಿಸಿಬಿಟ್ಟಿದೆ. ಅದಕ್ಕಾಗಿಯೇ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಎನಿಸಿಕೊಂಡಿರುವ ಜೆಡಿಎಸ್ ಕೂಡ ತನ್ನ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದೆ. ಬಿಜೆಪಿ ಸಹ ಹಿಂದೆ ಇದೇ ಅಂಶವನ್ನು ಪ್ರಸ್ತಾಪಿಸಿತ್ತು. ಮಾತೃಭಾಷೆಯಲ್ಲಿನ ಕಲಿಕೆ ಅತ್ಯುತ್ತಮ ಎಂಬುದನ್ನು ಜಗತ್ತಿನ ಎಲ್ಲಾ ತಙ್ಞರು ಸಾರುತ್ತಾ ಬಂದಿದ್ದಾರೆ. ಯುನೆಸ್ಕೋ ಸಹ ಈ ವಿಷಯವನ್ನು ಒಪ್ಪಿಕೊಂಡಿದೆ. ನಮ್ಮ ಮುಂದಿರುವ ಸವಾಲು ಏನೆಂದರೆ ಮಾತೃಭಾಷೆಯಲ್ಲಿ ಜಗತ್ತಿನಲ್ಲಿಯೇ ಅತ್ಯುತ್ತಮ ಎನಿಸುವಂತಹ ಶಿಕ್ಷಣವ್ಯವಸ್ಥೆಯನ್ನು ರೂಪಿಸಿ, ಜನರಿಗೆ ಮಾತೃಭಾಷಾ ಶಿಕ್ಷಣದ ಪ್ರಯೋಜನಗಳನ್ನು ಮನದಟ್ಟು ಮಾಡಿಸಿ ಆ ಮೂಲಕ ನಾಡಿನ ಅಭಿವೃದ್ಧಿಗೆ ಭದ್ರ ತಳಪಾಯ ಹಾಕಬೇಕು. ಏಕೆಂದರೆ ದೇಶದ ಭವಿಷ್ಯದ ಬೀಜ ಮೊಳಕೆಯೊಡೆಯುವುದು ನಮ್ಮ ಶಿಕ್ಷಣವ್ಯವಸ್ಥೆಯಲ್ಲಿಯೇ. ನಾವು ಬಿತ್ತಿದನ್ನೇ ನಾವು ಪಡೆಯುತ್ತೇವೆ.

ಮೇಲಿನ ಅಭಿವೃದ್ಧಿಯ ಮಾದರಿಗಳು ನಮ್ಮ ನಾಯಕರ ಮುಂದಿದ್ದರೂ ಅವರಿಗೆ ಅದು ಬೇಕಾಗಿಲ್ಲ. ಅವರ ಅಭಿವೃದ್ಧಿಯ ಮಾದರಿಗಳೇ ಬೇರೆ. ಅವರಿಗೆ ಬೋರ್‍ವೆಲ್ ಕೊರೆಸುವುದರಲ್ಲಿ ಇರುವ ಆಸಕ್ತಿ ಇಂಗುಗುಂಡಿ ತೋಡಿಸಿ ಅಂತರ್ಜಲ ಹೆಚ್ಚಿಸುವುದರಲ್ಲಿ, ನೆಲಕ್ಕೆ ಬಿದ್ದ ಒಂದೊಂದು ಹನಿಯನ್ನು ಕೊಯ್ಲು ಮಾಡಿ ಉಪಯೋಗಿಸುವುದರಲ್ಲಿ ಇಲ್ಲ. ಇವರದೇನಿದ್ದರೂ ನದಿಗಳನ್ನೇ ತಿರುಗಿಸಿ ನೀರು ಹರಿಸುವ ಬಣ್ಣದ ಯೋಜನೆಗಳು. ಕೆರೆ ಕಟ್ಟಬೇಕಿರುವ ಇವರೇ ಕೆರೆಗಳನ್ನು ಒತ್ತುವರಿ ಮಾಡುತ್ತಾರೆ. ದೇವಸ್ಥಾನದ ನೆಪವೊಡ್ಡಿ ಬೆಟ್ಟದ ಮೇಲಿನವರೆಗೂ ರಸ್ತೆ ಮಾಡಿಸುತ್ತಾರೆ. ಅಲ್ಲಿನ ಮಳೆಗೆ ರಸ್ತೆ ಕಿತ್ತು ಬರುತ್ತಲೂ ಹೊಸದಾಗಿ ರಸ್ತೆ ಹಾಕಿಸುತ್ತಾರೆ. ಇದರ ನಡುವೆ ಕಡಿದು ಹಾಕಿದ ಕಾಡು ಇವರಿಗೆ ಲೆಕ್ಕವೇ ಅಲ್ಲ. ಗಣಿಗಾರಿಕೆಯಿಂದ ಕಳೆದುಕೊಂಡ ಅಮೂಲ್ಯ ನೈಸರ್ಗಿಕ ಸಂಪತ್ತು ಇವರಿಗೆ ಏನೂ ಅಲ್ಲ. ಕೈಗಾರಿಕೆಗಳಿಗೆ ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುನ ಸರ್ಕಾರವೇ ಕೃಷಿಬಜೆಟನ್ನು ಮಂಡಿಸುತ್ತದೆ. ಇವೇ ಮೊದಲಾದವುಗಳು ಅಭಿವೃದ್ಧಿಯ ಹೆಸರಿನಲ್ಲಿ ನಡೆದುಕೊಂಡು ಬಂದಿರುವ ವೈರುಧ್ಯಗಳು.

ಸದ್ಯಕ್ಕೆ ನಮ್ಮ ಮುಂದಿರುವುದು ಎರಡು ದಾರಿಗಳು. ಅನೂಚಾನವಾಗಿ ನಡೆದುಕೊಂಡು ಬಂದಿರುವ ಈ ಅಭಿವೃದ್ಧಿಯ ಮಾದರಿಯನ್ನು ಒಪ್ಪಿಕೊಂಡು ನಡೆದು ನಮಗೆ ನಾವೇ ಗುಂಡಿಯನ್ನು ತೋಡಿಕೊಳ್ಳುವುದು ಅಥವಾ ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ, ಪರಿಸರ ಪರ ಅಭಿವೃದ್ಧಿಯ ಪಥದಲ್ಲಿ ನಡೆಸಬಲ್ಲ ನಾಯಕರನ್ನು ಆರಿಸುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಯ ಮೂಲಕ ಎಲ್ಲ ವರ್ಗದ ಜನರಿಗೂ ತಮ್ಮ ಜನಪ್ರತಿನಿಧಿಗಳನ್ನು ಆರಿಸಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ಈ ಸದವಕಾಶ ಒದಗಿ ಬರುವುದು ೫ ವರ್ಷಗಳಿಗೊಮ್ಮೆ. ಇದೀಗ ಮೇ ೫ರಂದು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನಮ್ಮ ದೇಶ ಬದಲಾಗುವುದಿಲ್ಲ ಎಂಬ ಸಿನಿಕತನ ಬಿಟ್ಟು ಬದಲಾವಣೆಯ ಮೊದಲ ಹೆಜ್ಜೆಯಾಗಿ ನಮ್ಮ ನಾಡನ್ನು ನೈಜ ಅಭಿವೃದ್ಧಿಯ ಪಥದಲ್ಲಿ ಸಾಗಿಸಬಲ್ಲ ಶಕ್ತಿಯುಳ್ಳವರಿಗೆ ಮತ ನೀಡೋಣ. ಎಷ್ಟೇ ದೂರದ ಪಯಣವೂ ಸಹ ಶುರುವಾಗುವುದು ಸಣ್ಣ ಹೆಜ್ಜೆಯಿಂದಲೇ.ಆಕರಸೂಚಿ:
"ಧರೆ ಹತ್ತಿ ಉರಿದರೆ" - ಡಾ. ಟಿ. ಆರ್. ಚಂದ್ರಶೇಖರ
"ಅಭಿವೃದ್ಧಿಯ ಅಂಧಯುಗ" - ನಾಗೇಶ ಹೆಗೆಡೆ

ಚಿತ್ರ: ಅಂತರ್ಜಾಲ.