Thursday, June 27, 2013

ಕಲಿಯಬೇಕಿರುವ ಪಾಠಗಳು..

ಕಲಿಯಬೇಕಿರುವ ಪಾಠಗಳು..

ಉತ್ತರಖಂಡದಲ್ಲುಂಟಾದ ಪ್ರಕೃತಿ ವಿಕೋಪ ಎಂತಹ ಗಟ್ಟಿ ಮನಸ್ಸಿನವರನ್ನೂ ನಡುಗಿಸಿಬಿಡುವಂತಹದ್ದು. ಉಕ್ಕಿಹರಿಯುತ್ತಿರುವ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ರಸ್ತೆ, ಸೇತುವೆಗಳು, ನೋಡನೋಡುತ್ತಿದ್ದಂತೆಯೇ ಕುಸಿದು ಬೀಳುತ್ತಿರುವ ಕಟ್ಟಡಗಳು, ನಿರಾಶ್ರಿತರಾಗಿರುವ ಅದೆಷ್ಟೋ ಸಾವಿರ ಜನರು. ತೀರ್ಥಯಾತ್ರೆಗೆಂದು ಬಂದವರು ಅಂತಿಮಯಾತ್ರೆಯನ್ನೇ ಮುಗಿಸಿದ್ದಕ್ಕಿಂತ ದುರದೃಷ್ಟಕರ ವಿಚಾರ ಇನ್ನೊಂದಿಲ್ಲ. ಪ್ರಕೃತಿಯ ಈ ಮುನಿಸಿಗೆ ಕಾರಣವಾದರು ಏನು..? ಇದು ಕೇವಲ ನೈಸರ್ಗಿಕ ಅವಘಡವೇ..? ಇದರಲ್ಲಿ ಮನುಷ್ಯನ ಪಾಲೆಷ್ಟು..? ಉತ್ತರದ ಹಿಂದಿರುವುದು ಪ್ರಕೃತಿಯ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯದ ಕಥೆ.

ಹಿಮಾಲಯದಲ್ಲಿ ಹುಟ್ಟುವ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗುತ್ತಿರುವುದು ಇದೇ ಮೊದಲೇನಲ್ಲ. ಬಹುಷಃ ಇದೇ ಕೊನೆಯದೂ ಆಗಿರಲಾರದು. ಹಿಮಾಲಯದ ಆಳವಾದ ಕಮರಿಗಳನ್ನು ನೋಡಿದವರಿಗೆ ಅಲ್ಲಿ ಹುಟ್ಟುವ ನದಿಗಳು ಪ್ರವಾಹವನ್ನುಂಟು ಮಾಡಬಲ್ಲವು ಎಂಬುದನ್ನು ನಂಬುವುದು ಸ್ವಲ್ಪ ಕಷ್ಟವೇ. ಸೋಜಿಗವೆನಿಸಿದರೂ ಅಲ್ಲಿ ಕಾಲಾಂತರಗಳಿಂದ ಪ್ರವಾಹಗಳು ಜರುಗುತ್ತಲೇ ಇವೆ.ಈ ಮೊದಲು ಅಲ್ಲಲ್ಲಿ ಉಂಟಾಗುತ್ತಿದ್ದ ಭೂಕುಸಿತಗಳು ಹರಿಯುವ ನೀರನ್ನು ಅಡ್ಡಗಟ್ಟಿ ನೈಸರ್ಗಿಕವಾಗಿ ಆಣೆಕಟ್ಟೊಂದನ್ನು ನಿರ್ಮಿಸುತ್ತಿದ್ದವು. ಹರಿಯುವ ನದಿ ತಿರುವಿನಲ್ಲಿ ಉಂಟು ಮಾಡುತ್ತಿದ್ದ ಕೊರೆತ, ಗುಡ್ಡಗಳ ಇಳಿಜಾರೇ ಗಟ್ಟಿಯಾಗಿಲ್ಲದೇ ಇದ್ದದ್ದು, ಎಡಬಿಡದೆ ಸುರಿಯುತ್ತಿದ್ದ ಧಾರಾಕಾರ ಮಳೆ ಇವೇ ಮೊದಲಾದವುಗಳು ಭೂಕುಸಿತವನ್ನುಂಟುಮಾಡುತ್ತಿದ್ದವು. ನೀರಿನ ಒತ್ತಡ ಹೆಚ್ಚಿ ಈ ಆಣೆಕಟ್ಟುಗಳು ಒಡೆದು ಹೋದಾಗ ಪ್ರವಾಹ ಸಂಭವಿಸುತ್ತಿತ್ತು. ಹೀಗೆ ಉಂಟಾದ ಪ್ರವಾಹದಿಂದ ಹಲವು ನಗರಗಳು ಮುಳುಗಡೆಯಾಗಿವೆ, ಹಲವು ನದಿಗಳು ತಮ್ಮ ದಿಕ್ಕುಗಳನ್ನೆ ಬದಲಾಯಿಸಿವೆ. ಆದರೆ ಈಚೆಗೆ ಸಂಭವಿಸಿದ ಹಿಮಾಲಯ ಸುನಾಮಿ ಎಂದೇ ಬಣ್ಣಿಸಲಾಗುತ್ತಿರುವ ಉತ್ತರಖಂಡದಲ್ಲಿನ ದುರಂತ ಇಲ್ಲಿಯವರೆಗಿನ ದುರಂತಗಳಲ್ಲಿ ಅತ್ಯಂತ ಭೀಕರವಾದುದು. ಎದುರಿಗಿದ್ದ ಗುಡ್ಡ, ಕಟ್ಟಡ, ಸೇತುವೆ, ಜನ, ಜಾನುವಾರುಗಳು ಇವ್ಯಾವುದನ್ನೂ ಲೆಕ್ಕಿಸದೆ ಕಬಳಿಸಿ ರಭಸದಿಂದ ನುಗ್ಗುತ್ತಿದ್ದ ಗಂಗೆಯ ಆರ್ಭಟಕ್ಕೆ ಪರಶಿವನು ಸಂತ್ರಸ್ತ. ದೇವನದಿ ಗಂಗೆ ಭೂಮಿಗೆ ಇಳಿಯಲು ಭಗೀರಥನ ಪ್ರಯತ್ನ ಕಾರಣವಾದರೆ, ಈ ರೀತಿ ಉಕ್ಕಿಹರಿಯಲು ಮಾನವನ ಮಿತಿಯಿರದ ದುರಾಸೆಯೇ ಕಾರಣ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಸಿಸ ದೌರ್ಜನ್ಯದ ಫಲವಿದು.

ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ನಮ್ಮ ಋತುಮಾನಗಳಲ್ಲಿ ಹಲವು ಬದಲಾವಣೆಗಳುಂಟಾಗಿವೆ. ವಿಪರೀತ ಚಳಿ, ದೀರ್ಘಕಾಲದ ಬೇಸಿಗೆ, ಒಮ್ಮೊಮ್ಮೆ ಅನಾವೃಷ್ಟಿ, ಮತ್ತೊಮ್ಮೆ ಅತಿವೃಷ್ಟಿ. ಬದಲಾದ ಹವಾಮಾನದಿಂದಾಗಿ ಮಳೆ ಬೀಳುವ ಕ್ರಮ ಕೂಡ ಬದಲಾಗಿದೆ. ವರ್ಷಪೂರ್ತಿ ಬೀಳಬೇಕಿದ್ದ ಮಳೆ ಕೇವಲ ಒಂದೆರಡು ದಿನಗಳಲ್ಲಿ ಸುರಿದು ಹೋಗುತ್ತಿದೆ. ಹೀಗೆ ಬಿದ್ದ ಮಳೆನೀರು ಭೂಮಿಯೊಳಗೆ ಇಂಗದೆ ಹರಿದುಹೋಗುತ್ತಿದೆ. ಭೂಮಿಗೆ ಹಸಿರು ಹೊದಿಕೆಗಳಿಲ್ಲದೆ ಇರುವುದರಿಂದ ಮೇಲ್ಮಣ್ಣು ಕೊಚ್ಚಿಕೊಂಡು ಹೋಗಿ ನದಿಯಲ್ಲಿ ಹೂಳು ತುಂಬಿಕೊಳ್ಳುವುದಲ್ಲದೆ ನದಿಗಳ ನೀರಿನ ಮಟ್ಟ ಹೆಚ್ಚಿ ಪ್ರವಾಹಗಳು ಉಂಟಾಗುತ್ತಿವೆ. ಮೊನ್ನೆ ಉತ್ತರಖಂಡದಲ್ಲಾದದ್ದು ಇದೇ. ಮೊದಲು ಮೇಘಸ್ಫೋಟದಿಂದ ಎಂದು ಹೇಳಲಾದ ಭಾರಿಮಳೆಯನ್ನು ಹಿಡಿದಿಟ್ಟುಕೊಳ್ಳಲಾಗದಿದ್ದುದರಿಂದ ಪ್ರವಾಹವುಂಟಾಯಿತು. ಅನೀರಿಕ್ಷಿತವಾಗಿ ಬರುವ, ಸ್ವಲ್ಪವೇ ಕಾಲ ಇರುವ ಆದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ಮಳೆಗೆ ಮೇಘಸ್ಫೋಟ ಎನ್ನುತ್ತಾರೆ. ಸಾಮಾನ್ಯವಾಗಿ ಮುಂಗಾರಿನಲ್ಲಿ ದಿನವೊಂದಕ್ಕೆ ಭಾರತದ ಬಹುತೇಕ ಕಡೆ ಬೀಳುವ ಸರಾಸರಿ ಮಳೆ ೨೦ ಮಿಮೀ. ಆದರೆ ಜೂನ್ ೧೬ರಂದು ಉತ್ತರಖಂಡದಲ್ಲಿ ಸುರಿದದ್ದು ಬರೋಬ್ಬರಿ ೨೪೦ಮಿಮೀ. ಮಳೆ. ಆದರೆ ಅಲ್ಲಿನ ಹವಾಮಾನ ಇಲಾಖೆಯ ಪ್ರಕಾರ ಅಲ್ಲಿ ಮೇಘಸ್ಫೋಟವಾಗಿರಲಿಲ್ಲ. ಬದಲಿಗೆ ಬಿದ್ದ ಈ ಭಾರಿ ಮಳೆ ಪ್ರವಾಹವನ್ನುಂಟು ಮಾಡಿತು. ಮೊದಲೇ ಹೇಳಿದ ಹಾಗೆ ಹಿಮಾಲಯದಲ್ಲಿ ಹುಟ್ಟುವ ನದಿಗಳಿಗೆ ಪ್ರವಾಹ ಹೊಸತೇನಲ್ಲ. ಆದರೆ ಈ ಬಾರಿ ದುರಂತದ ತೀವ್ರತೆ ಕಂಡುಕೇಳರಿಯದ ರೀತಿಯಲ್ಲಿ ಹೆಚ್ಚಲು ಅಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಅನಾಚಾರಗಳೇ ಕಾರಣ. 

ಬದಲಾಗುತ್ತಿರುವ ನದಿಪಾತ್ರಗಳು
ನದಿಪಾತ್ರಗಳಲ್ಲಿ ನಡೆಯುತ್ತಿರುವ ಹಲವು ಚಟುವಟಿಕೆಗಳು ನದಿಗಳ ಮೂಲಸ್ವರೂಪವನ್ನೇ ಬದಲಾಯಿಸಿಬಿಟ್ಟಿವೆ. ನದಿಯೊಂದಕ್ಕೆ ಪ್ರವಾಹ ಉಂಟಾದಾಗ ಹರಿಯುವ ಹೆಚ್ಚುವರಿ ನೀರನ್ನು ತಿರುಗಿಸಲು ಕಾಲುವೆಗಳಿರುತ್ತವೆ. ಇಂತಹ ಕಾಲುವೆಗಳಿರುವಲ್ಲಿ ಯಾವುದೇ ತರಹದ ಕೆಲಸಗಳು ನಡೆಯಕೂಡದು. ನದಿಗಳ ತಟಗಳಲ್ಲಿಯೇ ನಾಗರೀಕತೆ ಅರಳಿದರೂ ಇಂತಹ ಕಾಲುವೆಗಳಿದ್ದ ಕಡೆ ಮನೆ ಕಟ್ಟುವುದು ಅಥವಾ ಇನ್ನ್ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತಿರಲಿಲ್ಲ. ಆದರೆ ಬದಲಾದ ಸನ್ನಿವೇಶಗಳಲ್ಲಿ ನಡೆದ ಕಾರ್ಯಚಟುವಟಿಕೆಗಳು ಇಂತಹ ಕಾಲುವೆಗಳನ್ನೆಲ್ಲಾ ನುಂಗಿ ಹಾಕಿವೆ. ಈಗ ನದಿಗಳ ದಡದಲ್ಲಿಯೂ ಎಗ್ಗಿಲ್ಲದೆ ನಿರ್ಮಾಣಕಾರ್ಯಗಳು ನಡೆಯುತ್ತಿವೆ. ಇಲ್ಲಿಯೇ ಜನವಸತಿ ಪ್ರದೇಶಗಳು ರೂಪುಗೊಳ್ಳುತ್ತಿವೆ. ಈಗ ನದಿ ಉಕ್ಕಿ ಪ್ರವಾಹವುಂಟಾದರೆ, ನದಿ ನೀರು ಇನ್ನೆಲ್ಲಿ ತಾನೆ ಹರಿದೀತು..?

ಜಲವಿದ್ಯುತ್ ಯೋಜನೆಗಳು
ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ ಹಾಗೂ ಉತ್ತರಖಂಡ ವಿದ್ಯುಚ್ಛಕ್ತಿ ನಿಗಮ ಗಂಗಾ ನದಿಯೊಂದರಿಂದಲೇ ೯೦೦೦ಮೆವ್ಯಾ ವಿದ್ಯುತ್ ಉತ್ಪಾದನೆಗೆ ಅಂದಾಜಿಸಿ ೭೦ ಜಲವಿದ್ಯುತ್ ಯೋಜನೆಗಳನ್ನು ಪ್ರಾರಂಭಿಸಲು ಯೋಜನೆ ಹಾಕಿದೆ. ಗಂಗಾ ಮತ್ತು ಅದರ ಉಪನದಿಗಳನ್ನು ಸುರಂಗ ಕೊರೆದು ತಿರುಗಿಸಿ ಅಥವಾ ಆಣೆಕಟ್ಟುಗಳನ್ನು ಕಟ್ಟುವ ಮೂಲಕ ವಿದ್ಯುತ್ ಉತ್ಪಾದನೆಗೆ ಯೋಜಿಸಲಾಗಿದೆ. ಇದರಿಂದಾಗಿ ಭಾಗೀರಥಿಯ ಶೇ ೮೦ರಷ್ಟು ಹಾಗೂ ಅಲಕಾನಂದ ನದಿಯ ಶೇ೬೫ರಷ್ಟು ನದಿಪಾತ್ರಗಳು ಧಕ್ಕೆಗೊಳಗಾಗಲಿವೆ. ಈ ರೀತಿ ಒಂದರಹಿಂದೆ ಒಂದು ವಿದ್ಯುತ್ ಘಟಕಗಳನ್ನು ನಿರ್ಮಿಸಿರುವುದರಿಂದ ನದಿಗಳ ಹೆಚ್ಚಿನ ಭಾಗ ನೀರಿಲ್ಲದೆ ಒಣಗಿ ಅಲ್ಲಿನ ವಿಶೇಷ ಎನಿಸುವಂತಹ ಜಲಚರಗಳು ನಾಶಗೊಳ್ಳುತ್ತಿವೆ. ಅಲ್ಲದೆ ಆಣೆಕಟ್ಟೆಯ ಹಿನ್ನೀರಿನಲ್ಲಿ ಸಹಸ್ರಾರು ಹೆಕ್ಟೇರ್ ಕಾಡು ಕೂಡ ಮುಳುಗಿ ಹೋಗಲಿದ್ದು ಹಿಮಾಲಯದ ಜೀವಸಂಕುಲಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡಲಿವೆ. ಅಲ್ಲದೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸುರಂಗಗಳನ್ನು ಕೊರೆಸುತ್ತಿರುವುದು, ಬ್ಯಾರೇಜ್‍ಗಳನ್ನು ನಿರ್ಮಿಸುತ್ತಿರುವುದು ಅಲ್ಲಿನ ಗುಡ್ಡಗಳನ್ನು ಅಸ್ಥಿರಗೊಳಿಸುತ್ತಿವೆ.ಈ ಜಲವಿದ್ಯುತ್ ಯೋಜನೆಗಳು ಈಗಾಗಲೇ ಸೂಕ್ಷ್ಮ ಪ್ರದೇಶ ಎನಿಸಿರುವ ಹಿಮಾಲಯವನ್ನು ಇನ್ನಷ್ಟು ಸೂಕ್ಷ್ಮಗೊಳಿಸಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತೆ ಮಾಡಿವೆ.

ಪ್ರವಾಸೋದ್ಯಮ ಹಾಗೂ ರಸ್ತೆಗಳು
ಉತ್ತರಖಂಡ ಹಿಂದೂಗಳ ಪಾಲಿಗೆ ಪುಣ್ಯಕ್ಷೇತ್ರಗಳೆನಿಸಿರುವಂತಹ ಹಲವು ಕ್ಷೇತ್ರಗಳನ್ನು ಹೊಂದಿದೆ. ಚಾರ್‌ಧಾಮ್‍ಗಳಾದ ಗಂಗೋತ್ರಿ, ಯಮುನೋತ್ರಿ, ಬದ್ರಿನಾಥ, ಕೇದಾರನಾಥಗಳಲ್ಲದೆ ಹೄಷಿಕೇಷ, ರುದ್ರಪ್ರಯಾಗ, ಹರಿದ್ವಾರ, ಹೇಮ್‍ಕುಂಡ, ಗೌರಿಕುಂಡ, ರಾಮ್‍ಬನ್ ಮುಂತಾದ ಪುಣ್ಯಕ್ಷೇತ್ರಗಳು ಉತ್ತರಖಂಡದ್ದುದ್ದಕ್ಕೂ ಹಬ್ಬಿಕೊಂಡಿವೆ. ಅಲ್ಲಿಗೆ ತೆರಳುವ ಪ್ರವಾಸಿಗಳು ಎಲ್ಲಾ ಕ್ಷೇತ್ರಗಳನ್ನು ದರ್ಶನ ಮಾಡಿಯೇ ಹೋಗುತ್ತಾರೆ. ಪ್ರವಾಸೋದ್ಯಮಕ್ಕಿರುವ ಈ ವಿಫುಲ ಅವಕಾಶಗಳನ್ನು ಬಳಸಿಕೊಳ್ಳಲೆಂದೇ ಅಲ್ಲಿ ವಾಹನಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಿದೆ. ೨೦೦೫-೦೬ರ ಸಾಲಿನಲ್ಲಿ ಹೊಸದಾಗಿ ನೋಂದಣಿಗೊಂಡ ವಾಹನಗಳ ಸಂಖ್ಯೆ ೪೦೦೦ದಷ್ಟಿದ್ದರೆ ಕಳೆದ ೨೦೧೨-೧೩ರ ಸಾಲಿನಲ್ಲಿ ಹೊಸದಾಗಿ ೪೦೦೦೦ದಷ್ಟು ಹೊಸವಾಹನಗಳು ನೋಂದಣಿಯಾಗಿದ್ದವು. ಈ ರೀತಿಯಾಗಿ ರಸ್ತೆಗಳ ಮೇಲೆ ಹೆಚ್ಚುತ್ತಿರುವ ಒತ್ತಡದಿಂದ ಅಲ್ಲಿನ ಗುಡ್ಡಗಳು ಅಸ್ಥಿರಗೊಂಡು ಭೂಕುಸಿತಗಳುಂಟಾಗುತ್ತಿದೆ. ಪ್ರವಾಸೋದ್ಯಮದ ಬಾಗಿಲು ಹೆಚ್ಚೆಚ್ಚು ತೆರೆದಂತೆಲ್ಲಾ ಭೂಕುಸಿತಗಳು ಸಹ ಗಣನೀಯವಾಗಿ ಹಚ್ಚಿವೆ. ಇದರ ಜೊತೆಗೆ ರಸ್ತೆ ವಿಸ್ತರಣೆ, ಹೊಸರಸ್ತೆಗಳ ಹೆಸರಿನಲ್ಲಿ ಗುಡ್ಡಗಳನ್ನು ಕೊರೆಯುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿವೆ. ಹೊರಗಿನಿಂದ ಬರುವ ಕಾಂಟ್ರ್ಯಾಕ್ಟರ್‌ಗಳಿಗೆ ಗುಡ್ಡಗಳ ರಚನೆಗಳ ಕುರಿತು ಅರಿವಿರುವುದಿಲ್ಲ. ಹೆಚ್ಚಿನ ಬಾರಿ ಹಣ ಉಳಿಸಲು ತಮಗಿಷ್ಟವಾದ ಕಡೆ, ತಮಗಿಷ್ಟ ಬಂದ ಹಾಗೆ ಗುಡ್ಡಗಳನ್ನು ಕಡಿದು ರಸ್ತೆ ಮಾಡುತ್ತಾರೆ.ಈ ರಸ್ತೆಗಳೇ ಪದೇಪದೇ ಭೂಕುಸಿತದ ತೊಂದರೆಕ್ಕೊಳಗಾಗಿ, ಕಾಂಟ್ರ್ಯಾಕ್ಟರ್‌ಗಳು ರಸ್ತೆಯನ್ನು ದುರಸ್ತಿ ಮಾಡುವುದರಲ್ಲೇ ಜೀವನ ಕಳೆಯುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಹಿಮಾಲಯದ ಶ್ರೇಣಿಗಳಲ್ಲಿ ಯಾವುದೇ ಪೂರ್ವಯೋಜನೆಯಿಲ್ಲದೆ ಕೈಗೊಳ್ಳುತ್ತಿರುವ ಅಭಿವೃದ್ಧಿ ಕೆಲಸಗಳೇ ಅಲ್ಲಿನ ಜನರ ಪಾಲಿಗೆ, ಹಿಮಾಲಯದ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಹೀಗೆನ್ನುವುದಾದರೆ ನಮಗೆ ಸಂಪರ್ಕ ಸಾಧಿಸಲು ರಸ್ತೆಗಳು ಬೇಡವೇ..? ಜಲವಿದ್ಯುತ್ ಯೋಜನೆಗಳಿಲ್ಲದೆ ನಾವು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದಾದರು ಹೇಗೆ..? ಉತ್ತರ ಸುಲಭ. ಸಾರಿಗೆ ವ್ಯವಸ್ಥೆಗಾಗಿ ನಮಗೆ ರಸ್ತೆಗಳು ಬೇಕೆ ಬೇಕು. ಆದರೆ ರಸ್ತೆಗಳ ನಿರ್ಮಾಣ ಹಿಮಾಲಯದ ಪರ್ವತ ಶ್ರೇಣಿಗಳನ್ನು ಅಸ್ಥಿರಗೊಳಿಸಬಾರದು. ಈ ಮೊದಲೇ ಭೂಕುಸಿತವುಂಟಾದ ಜಾಗದಲ್ಲಿ ಹೊಸರಸ್ತೆಗಳನ್ನು ನಿರ್ಮಿಸುವುದು ಹಿಮಾಲಯಗಳ ಮಟ್ಟಿಗೆ ಒಳ್ಳೆಯ ಮಾರ್ಗ. ರಸ್ತೆಗಳಿಗೆ ಸಮಾನಾಂತರವಾಗಿ ನೀರನ್ನು ಕೆಳಕ್ಕೆ ತಳ್ಳಲು ಸೂಕ್ತವಾದ ಚರಂಡಿವ್ಯವಸ್ಥೆಯು ಇರಬೇಕು. ಇದು ಭೂಕುಸಿತಗಳನ್ನು ತಕ್ಕಮಟ್ಟಿಗೆ ತಡೆಯಬಲ್ಲದು. ಅಪಾರಸಾಧ್ಯತೆಗಳಿರುವ ನವೀಕರಿಸಬಲ್ಲ ಇಂಧನಮೂಲಗಳತ್ತ ದೃಷ್ಟಿಹರಿಸಬೇಕಿರುವುದು ಈ ಕ್ಷಣದ ಅಗತ್ಯ. ವಿಕೇಂದ್ರಿಕೃತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಸರಣೆಯಲ್ಲಿನ ಸೋರಿಕೆಯನ್ನು ಕಡಿಮೆಗೊಳಿಸಬಹುದು. ಇದರಿಂದಾಗಿ ನಷ್ಟ ಕಡಿಮೆಯಾಗಿ ವಿದ್ಯುತ್ ಸ್ವಾವಲಂಬಿಯಾಗಬಹುದು. ಹಲವಾರು ದುಷ್ಪರಿಣಾಮಗಳುಳ್ಳ ಜಲವಿದ್ಯುತ್ ಯೋಜನೆಗಳಿಗಿಂತಲೂ ಇವು ಸಾವಿರ ಪಾಲು ಉತ್ತಮ.

ಈಗಾಗಲೇ ನಾವು ದಾರಿ ತಪ್ಪಿದ್ದೇವೆ. ನಾವು ದಾರಿ ತಪ್ಪಿದಾಗಲೆಲ್ಲಾ ಪ್ರಕೃತಿ ಇಂತಹ ಅವಘಡಗಳ ಮೂಲಕ ಪಾಠ ಕಲಿಸಿ ಸರಿದಾರಿಯಲ್ಲಿ ನಡೆಯುವಂತೆ ದಾರಿ ತೋರುತ್ತಾಳೆ. ಈಗಲಾದರೂ ಎಚ್ಚೆತ್ತುಕೊಂಡು ಸಾಗಬೇಕಿರುವುದು ನಮ್ಮ ಕರ್ತವ್ಯ. ಈಗಲೂ ಹಳೆಯ ದಾರಿಯಲ್ಲಿ ಮುಂದವರೆದರೆ ಪ್ರಕೃತಿ ಕಲಿಸಲಿರುವ ಮುಂದಿನ ಪಾಠಗಳಿಗೆ ತಯಾರಾಗಿರಬೇಕಿರುತ್ತದೆ. 

ವಿಷಯ ಸಂಗ್ರಹ: http://www.downtoearth.org.in/

9 comments:

  1. ನಿಮ್ಮ ಲೇಖನದ ಹರಿವು ಇಷ್ಟವಾಯಿತು. .ಬರಿ ಅವಘಡದ ಮೇಲೆ ಬೆಟ್ಟು ತೋರುತ್ತ ಮಾನವನ ದುರಾಸೆ ಬಗ್ಗೆ ಪುಟಗಟ್ಟಲೆ ಇರುವ ಲೇಖನಗಳ ಮಧ್ಯೆ ನಿಮ್ಮ ಲೇಖನ ಯಾಕೆ ಹೇಗೆ ಮುಂದೇನು ಎಲ್ಲವನ್ನು ಸೂಕ್ಷ್ಮವಾಗಿ ವಿವರಿಸುವ ಪರಿ ಇಷ್ಟವಾಯಿತು. ವಿಷಯ ಆಧರಿಸಿದ ಲೇಖನವಾದರೂ ಅದನ್ನು ಹಂಚಿಕೊಂಡು ಅದನ್ನ ಬಿಡಿಬಿಡಿಯಾಗಿ ಪೋಣಿಸಿದ ರೀತಿಗೆ ಅಭಿನಂದನೆಗಳು

    ReplyDelete
    Replies
    1. ಶ್ರೀಕಾಂತ್ ಸರ್ ಧನ್ಯವಾದಗಳು.. ಓದಿದ್ದಕ್ಕೆ.. ಮೆಚ್ಚಿದ್ದಕ್ಕೆ..

      Delete
  2. ಉತ್ತಮ ಮಾಹಿತಿ ಸ೦ಗ್ರಹ ಮತ್ತು ಬರಹ ಗೆಳೆಯ. ಆದರ ಉತ್ತರಾಖ೦ಡದಲ್ಲಾದ ಪ್ರವಾಹಕ್ಕೆ ಮೇಘಸ್ಫೋಟ ಕಾರಣವಲ್ಲ ಎ೦ದು ಹವಾಮಾನ ಇಲಾಖೆ ಸ್ಪಷ್ಟಪದಿಸಿದೆ.

    ReplyDelete
    Replies
    1. ಹೌದು ರಾಕಿ.. ನೀನು ತಿಳಿಸಿದ ಹಾಗೆ ಭೀಕರ ಪ್ರವಾಹಕ್ಕೆ ಮೇಘಸ್ಫೋಟ ಕಾರಣವಲ್ಲ. ಬದಲಿಗೆ ಅಲ್ಲಿ ಬಿದ್ದ ಭಾರಿ ಮಳೆಯೇ ಕಾರಣ. ತಿದ್ದುಪಡಿಗಾಗಿ ಧನ್ಯವಾದಗಳು.. ಬರಹದಲ್ಲಿಯೂ ತಿದ್ದಿದ್ದೇನೆ.. ಮತ್ತೊಮ್ಮೆ ಧನ್ಯವಾದಗಳು..

      Delete
  3. ಮಾಹಿತಿ ಪೂರ್ಣ ಬರಹ ...
    ಎಲ್ಲರಿಗೂ ಉಪಯುಕ್ತ ಆಗೋ ತರದ ಈ ಭಾವವನಿಲ್ಲಿ ನೋಡಿ ಖುಷಿ ಆಯ್ತು .
    ಬರೀತಿರಿ

    ReplyDelete
    Replies
    1. ಧನ್ಯವಾದಗಳು ಭಾಗ್ಯಜೀ.. ನೀವು ಖುಷಿಪಟ್ಟಿದ್ದು ನಮಗೂ ಖುಷಿ ನೀಡಿತು..

      Delete
    2. This comment has been removed by the author.

      Delete
  4. ಅಜಯ್, ನಿನ್ನ ಎಲ್ಲಾ ಬರಹಗಳನ್ನು ಓದಿದೆ. ತುಂಬಾ ಇಷ್ಟವಾಯಿತು. ಪ್ರತಿಯೊಂದು ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಕೌಶಲ್ಯ ಎಲ್ಲರಲ್ಲೂ ಇರುವುದಿಲ್ಲ. ಆದ್ರೆ ಇದು ನಿನ್ನ ಬಳಿ ಇದೆ. ಈ ಕಾಣಿಕೆಯನ್ನು ಸದೂಪಯೋಗ ಪಡಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ.

    ReplyDelete
    Replies
    1. ಧನ್ಯವಾದಗಳು.. ಆದಿತ್ಯ.. ಹೀಗೆಯೇ ಪ್ರೀತಿಯಿರಲಿ..

      Delete