ಸಂಜೆ ಏಳರ ಸಮಯ. ಆಗಷ್ಟೇ ಸಂಜೆಯ ಕೆಂಪು ಕರಗಿ ನಿಧಾನವಾಗಿ ಕತ್ತಲು ಆವರಿಸುತ್ತಿತ್ತು. ಮನೆ ಸೇರುವ ಧಾವಂತದಲ್ಲಿ ಕೆಲವರು ಹೆಜ್ಜೆಯಿಡುತ್ತಿದ್ದರೆ, ಇನ್ನೊಂದಿಷ್ಟು ಜನ ತಮ್ಮ ಎಂದಿನ ವಾಕ್ ಮುಗಿಸಿ ರಾಜಕೀಯ, ಸಂಸಾರ ತಾಪತ್ರಯ ಅದು ಇದು ಎಂದು ಮಾತಾಡಿಕೊಳ್ಳುತ್ತ ನಿಧಾನವಾಗಿ ಸಾಗುತ್ತಿದ್ದರು. ಎಂದಿನಂತೆ ಅವಳ ಜೊತೆ ಮಾತು ಮುಗಿಸಿ ಮನೆ ಕಡೆ ಹೊರಟೆ.
ಬಾನಂಗಳದಲ್ಲಿ ಆಗಲೇ ಚಂದಿರ ಮೂಡಿದ್ದ. ಕರೆಂಟ್ ಇಲ್ಲದಿದ್ದುದ್ದರಿಂದ ಹಾಲು ಚೆಲ್ಲಿದಂತೆ ಬೆಳದಿಂಗಳು ಚೆಲ್ಲಿತ್ತು. ನಮ್ಮ ಮನೆಯ ಜಗುಲಿಯಲ್ಲಿ ಚಿಕ್ಕಚಿಕ್ಕ ಮಕ್ಕಳ ದಂಡೆ ನೆರೆದಿತ್ತು. ಅಲ್ಲೇ ಪಕ್ಕದಲ್ಲಿ ನನ್ನ ತಮ್ಮನೂ ಇದ್ದ. ನಮ್ಮ ತಾತ ಇವರೆಲ್ಲರನ್ನೂ ಕೂರಿಸಿಕೊಂಡು ಯಾವುದಾದರೊಂದು ದೇವರ ಕತೆಯನ್ನು ಹೇಳುತ್ತಿರಬೇಕೆಂದುಕೊಂಡೆ. ಹತ್ತಿರ ಹೋದೆ. ನೋಡಿದರೆ ಅಲ್ಲಿ ಕುಳಿತಿದ್ದವರು ನಮ್ಮ ತಾತನವರಲ್ಲ. ನರೆತ ಗಡ್ಡದ, ದುಂಡು ಮುಖದ ಆ ವ್ಯಕ್ತಿ, ತಮ್ಮ ಮಾತಿನಿಂದ ಸುತ್ತಲು ಕುಳಿತಿದ್ದ ಮಕ್ಕಳೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಅಲ್ಲಿ ಕುಳಿತಿದ್ದವರು ಪೂರ್ಣಚಂದ್ರ ತೇಜಸ್ವಿ ! ತಮ್ಮ ಎಂದಿನ ವಿನೋದಭರಿತ ಶೈಲಿಯಲ್ಲಿ ಪರಿಸರದ ವಿಸ್ಮಯಗಳನ್ನು, ಜೀವಜಗತ್ತಿನ ವೈವಿಧ್ಯಗಳನ್ನು, ನಾವೆಂದೂ ಗಮನಿಸಿರದ ನಮ್ಮ ಸುತ್ತಲೇ ನಡೆಯುವ ಅದ್ಭುತ ಎನಿಸುವ ಸೂಕ್ಷ್ಮ ವಿವರಗಳನ್ನು ತಿಳಿಸುತ್ತಿದ್ದರು. ಈಗಷ್ಟೇ ಅವರ ಪುಸ್ತಕಗಳ ಮೂಲಕ ಅವರ ಪರಿಚಯ ಮಾಡಿಕೊಳ್ಳುತ್ತಿರುವ ನನಗೆ ಅವರನ್ನು ಕಂಡ ತಕ್ಷಣ ಮೈಯಲ್ಲಿ ಮಿಂಚು ಹರಿದಂತಾಯ್ತು. ಸದ್ದು ಮಾಡದೆ ಅವರ ಬಳಿ ಹೋಗಿ ಕುಳಿತೆ. ಅವರು ತಾವು ಝರಿಯೊಂದರ ಮೂಲ ಹುಡುಕಿಕೊಂಡು ಹೋಗಿದ್ದರ ಬಗ್ಗೆ ಹೇಳುತ್ತಿದ್ದರು.
ತೇಜಸ್ವಿಯವರ ತೋಟದಲ್ಲಿ ಒಂದು ಚಿಕ್ಕ ಝರಿ ಹರಿಯುತ್ತಿತ್ತು. ಆ ಝರಿಯೇ ಅವರ ಮನೆಯ ನೀರಿನ ಮೂಲ. ಬಟ್ಟಬೇಸಿಗೆಯಲ್ಲಿಯೂ ಬೇರೆಲ್ಲಾ ಕಡೆ ನೀರಿಗೆ ಹಾಹಾಕಾರವಿದ್ದರೂ ಆ ಝರಿ ಮಾತ್ರ ಹರಿಯುತ್ತಿದ್ದುದರಿಂದ ತೇಜಸ್ವಿಯವರಿಗೆ ಆ ಝರಿಯ ಬಗ್ಗೆ ಕುತೂಹಲ. ಅದರ ನೀರಿನ ಪ್ರಮಾಣ ಅಳೆಯಲು ಅದಕ್ಕೊಂದು ಅಡ್ಡಗಟ್ಟೆ ಕಟ್ಟಿ ಪೈಪ್ ಮೂಲಕ ನೀರು ಹಾಯಿಸಿ ಸಂಗ್ರಹಿಸಿದರು. ಅದರಲ್ಲಿ ಒಂದು ನಿಮಿಷಕ್ಕೆ ಮೂವತ್ತು ಲೀಟರ್ ಅಂದರೆ ದಿನಕ್ಕೆ ಸುಮಾರು ೪೩,೦೦೦ ಲೀ. ನೀರು ಹರಿಯುತ್ತಿತ್ತು. ಅವರಿಗೆ ಈ ನೀರಿನ ಮೂಲ ಹುಡುಕಬೇಕೆನಿಸಿ ಅದರ ಪಾತ್ರದಲ್ಲಿ ನಡೆಯುತ್ತ ಹೋದರಂತೆ. ಮೇಲೆ ಹೋಗುತ್ತ ಹೋಗುತ್ತ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಅವರ ಅರಿವಿಗೆ ಬಂತು. ಹಾಗೆಯೇ ನಡೆಯುತ್ತ ಕೊರಕೊಲಿನೊಳಕ್ಕೆ ಹೊಕ್ಕರು. ಅಲ್ಲಿ ಬಿದ್ದಿದ್ದ ತರಗೆಲೆಗಳ ಹಾಸಿನೊಳಗೆ ಹಳ್ಳ ಎಲ್ಲಿದೆ ಎನ್ನುವುದು ಅವರ ಅರಿವಿಗೆ ಬರದೆ ಹಾಗೆಯೇ ಸುತ್ತಲೂ ನೋಡುತ್ತ ನಿಂತರಂತೆ. ಅಲ್ಲೊಂದು ಚಿಕ್ಕ ಗುಹೆ ಅವರ ಕಣ್ಣಿಗೆ ಬಿತ್ತು. ಆ ಗುಹೆಯ ಅಕ್ಕಪಕ್ಕಗಳಲ್ಲಿ ಫರ್ನ್ಗಳ, ಮರಗಳ, ಬೇರುಗಳು ಹೊರಚಾಚಿದ್ದವು. ಮೆಲ್ಲಗೆ ಅವುಗಳಿಂದ ನೀರು ಹನಿದು ಬೀಳುತ್ತಿತ್ತು. ಹನಿಯಾಗಿ ಬಿದ್ದ ನೀರು ನಿಧಾನವಾಗಿ ಹರಿಯಲಾರಂಭಿಸಿ ಝರಿಯಾಗಿತ್ತು. ದಿನಕ್ಕೆ ೪೩,೦೦೦ ಲೀ. ನೀರು ಹರಿಯುವ ಝರಿಯ ನೀರಿನ ಮೂಲ ಇದೇ ? ಎಂದುಕೊಂಡು ಆಶರ್ಯಪಡುತ್ತ ಇಳಿದು ಬರುತ್ತಿರಬೇಕಾದರೆ ದಂಡೆಯಲ್ಲಿ ಅನೇಕ ಕಡೆ ಗುಹೆಯಲ್ಲಿ ಕಂಡಂತೆಯೇ ನೀರು ತೊಟ್ಟಿಕ್ಕುತ್ತಿರುವುದನ್ನು ಕಂಡರು. ನಡೆದಂತೆ ನೀರಿನ ಪ್ರಮಾಣ ಹೆಚ್ಚುತ್ತ ದಿನಕ್ಕೆ ನಲ್ವತ್ಮೂರು ಸಾವಿರ ಲೀ. ಹರಿಯುವಷ್ಟು ಆಗಿತ್ತು. ಎಲ್ಲೋ ಒಂದು ಕಡೆ ಹುಟ್ಟುವ ನದಿಗೆ ಇಂತಹ ಸಹಸ್ರಾರು ಝರಿಗಳು ಕೂಡಿಕೊಂಡು ರಭಸವಾಗಿ ಹರಿಯುತ್ತ ಸಮುದ್ರ ಸೇರುತ್ತದೆ ಎಂದರು. ಗುಡ್ಡದ ಯಾವುದೋ ಮೂಲೆಯಲ್ಲಿ ನೀರು ಜಿನುಗಿ, ಒಂದೆಡೆ ಕೂಡಿ ಹರಿದು ಝರಿಯಾಗಿ ಹರಿಯುವುದನ್ನು ವಿವರಿಸುವಾಗ ಅವರ ಕಣ್ಣುಗಳಲ್ಲಿ ಒಂದು ವಿಶಿಷ್ಠ ಹೊಳಪಿತ್ತು, ಪ್ರಕೃತಿಯನ್ನು ಪರಿಚಯಿಸಿಕೊಳ್ಳುವ ತವಕವಿತ್ತು, ವಿಸ್ಮಯವಿತ್ತು. ಆ ವಿಸ್ಮಯ ಅಲ್ಲಿದ್ದ ಮಕ್ಕಳಲ್ಲಿ ತುಂಬಿಕೊಳ್ಳುತ್ತಿತ್ತು. ಅಲ್ಲಿಯವರೆಗೂ ರಾಜಕುಮಾರಿಯನ್ನು ಹುಡುಕಿಕೊಂಡು ಹೊರಟ ರಾಜಕುಮಾರನ ಕತೆಯನ್ನೋ, ಕಪ್ಪೆ ರಾಜಕುಮಾರನಾಗಿ ಬದಲಾದ ಕತೆಯನ್ನೋ, ತೊಂದರೆ ಮಾಡುತ್ತಿದ್ದ ರಾಕ್ಷಸರನ್ನು ದೇವರು ಅವತರಿಸಿ ಸಂಹರಿಸಿದ ಕತೆಯನ್ನೋ ಕೇಳಿದ್ದ ಮಕ್ಕಳಿಗೆ ಇದೊಂದು ವಿಶೇಷ ಅನುಭವ. ಇದೇ ಮೊದಲ ಬಾರಿಗೆ ತಮ್ಮ ಸುತ್ತಮುತ್ತಲೇ ನಡೆಯುತ್ತಿದ್ದ ವಿಸ್ಮಯಕಾರಿ ಘಟನಗಳಿಗೆ ಅವರು ಕಣ್ಣಾಗಿದ್ದರು.
ಅಲ್ಲಿದ್ದ ಎಲ್ಲಾ ಮಕ್ಕಳನ್ನು ಅವರ ವಿಧ್ಯಾಭ್ಯಾಸದ ಬಗ್ಗೆ ವಿಚಾರಿಸಿಕೊಂಡು ನನ್ನನ್ನು ಕರೆದರು. "ಏನು ಓದುತ್ತಿದ್ದೀಯಾ?" ಎಂದು ಕೇಳಿದರು. ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಮೂರನೇ ವರ್ಷ ಎಂದೆ. ಸುಮ್ಮನೆ " ನೀರು ಪಂಪ್ ಮಾಡುವುದು ಹೇಗೆ?" ಎಂದು ಕೇಳಿದರು. ಗೊತ್ತಿಲ್ಲವೆಂದೆ. "ಮೂರ್ಖ, useless fellow " ಎಂದು ಬೈದರು. ಅವರು ಕಾಡು ಕೊಂಡು ಮನೆ ಮಾಡಿದ ಹೊಸತರಲ್ಲಿ ನೀರಿನ ಅಗತ್ಯ ಹೆಚ್ಚಾದಾಗ ಝರಿಗೆ ಅಡ್ಡಕಟ್ಟೆ ಕಟ್ಟಿ, ಅದರ ಸಮೀಪ ಸ್ಕೂಟರ್ ನಿಲ್ಲಿಸಿ ಹಿಂದಿನ ಚಕ್ರಕ್ಕೆ ಅಳವಡಿಸಿದ್ದ ಒಂದು ಸಣ್ಣ ಪಂಪ್ನಿಂದ ಪೈಪ್ ಮೂಲಕ ನೀರು ಹರಿಸಿ ತೊಟ್ಟಿ ತುಂಬಿಸಿದ್ದನ್ನು ಹೇಳಿ ಮತ್ತಷ್ಟು ಬೈದು ಹೊರಟರು.
ಬೆಚ್ಚಿ ಬಿದ್ದವನಂತೆ ಎದ್ದಿದ್ದೆ! ನಂಬಲಿಕ್ಕಾಗುತ್ತಿಲ್ಲ! ಆಶ್ಚರ್ಯ ಮನದಲ್ಲಿ ಮನೆ ಮಾಡಿತ್ತು. ತೇಜಸ್ವಿಯವರು ನನ್ನ ಕನಸಿನಲ್ಲಿ ಬಂದಿದ್ದರು ! ಅಲ್ಲದೇ ಮಾತನಾಡಿಸಿ ಬೈದಿದ್ದರು! ಯಾವುದನ್ನೂ ಮರೆಯಬಾರದೆಂದು ತಕ್ಷಣ ಪೇಪರ್ನಲ್ಲಿ ಎಲ್ಲವನ್ನೂ ಬರೆದಿಟ್ಟುಕೊಂಡೆ. ತೇಜಸ್ವಿಯವರನ್ನು ಮಾತನಾಡಿಸಬೇಕೆಂದು, ಅವರ ಜೊತೆ ಕಾಲ ಕಳೆಯಬೇಕೆಂದು, ಅವರ ಹುಸಿಸಿಟ್ಟಿನ ಆದರೆ ಪ್ರೀತಿ ತುಂಬಿದ "ಮೂರ್ಖ, useless fellow " ಎಂಬ ಬೈಗುಳಗಳನ್ನು ಪ್ರಸಾದವೆಂದು ಸ್ವೀಕರಿಸಲು ಸಿದ್ಧರಿರುವವರ ದೊಡ್ಡ ಗುಂಪೇ ಕರ್ನಾಟಕದಲ್ಲಿ ಇತ್ತು. ನನಗೆ ಅವರು ಪರಿಚಿತರಾಗುವಷ್ಟರಲ್ಲಿ ಅವರು ಕಾಲವಾಗಿದ್ದರು. ಅವರ ಕೃತಿಗಳ ಮೂಲಕ, ಅವರ ಬಗೆಗಿನ ಕೃತಿಗಳ ಮೂಲಕ ಅವರನ್ನು ತಿಳಿದುಕೊಂಡಿದ್ದ ನನಗೆ ಅವರ ಬಗ್ಗೆ, ಅವರು ಬದುಕಿದ ರೀತಿಯ ಬಗ್ಗೆ ವಿಪರೀತ ಹೊಟ್ಟೆಕಿಚ್ಚು. ದೂರದ ಹಳ್ಳಿಯೊಂದರಲ್ಲಿ ಕುಳಿತು ತನ್ನ ಪಾಡಿಗೆ ತಾನು ಜೀವಿಸುತ್ತಾ ಸಾಹಿತ್ಯ, ಕೃಷಿ, ಫೋಟೋಗ್ರಫಿ, ಪಾಕಶಾಸ್ತ್ರ, ಪರಿಸರ ಚಳುವಳಿ, ಸಮಾಜವಾದಿ ಚಳುವಳಿ, ರೈತ ಹೋರಾಟ, ಕನ್ನಡ ಕಂಪ್ಯೂಟಿಂಗ್, ಜಾತಿ ವಿನಾಶ ಚಳುವಳಿ, ಶಿಕಾರಿ ಎಲ್ಲದರಲ್ಲೂ ಸೈ ಎನಿಸಿಕೊಂಡವರು ತೇಜಸ್ವಿಯವರು. ಯುವಕರಿಗೆ "ಅಚ್ಚರಿ", "ವಿಸ್ಮಯ", "ಅದ್ಭುತ" ಮುಂತಾದ ಪದಗಳನ್ನು ಕಲಿಸಿ ಆ ಮನೋಧರ್ಮವನ್ನು ರೂಪಿಸಿದವರು ತೇಜಸ್ವಿ. ಅವರನ್ನು ಕನಸಿನಲ್ಲಿ ಭೇಟಿಯಾದದ್ದು ನನ್ನ ಪಾಲಿಗೆ ಅಮೃತಘಳಿಗೆ.

ಯಾರ ಬಗ್ಗೆ ಜಾಸ್ತಿ ಯೋಚಿಸುತ್ತಿರುತ್ತೇವೇಯೋ ಅವರೇ ಕನಸಿನಲ್ಲಿ ಬರುತ್ತಾರೆ ಎಂದು ಚಿಕ್ಕಂದಿನಲ್ಲಿ ಕೇಳಿದ್ದೆ. ತೇಜಸ್ವಿಯವರನ್ನು ಇನ್ನಷ್ಟು ಕಾಣಲು ಅವರ ಪುಸ್ತಕಗಳನ್ನು ಓದುತ್ತಿದ್ದೆ, ನಿತ್ಯವೂ ಮಲಗುವಾಗ ಅವರ ಬಗ್ಗೆಯೇ ಯೋಚಿಸುತ್ತಿದ್ದೆ, . ಅವರ ಜೊತೆ ಭದ್ರಾ ನದಿ ದಂಡೆಯಲ್ಲಿ ನಡೆಯುತ್ತಾ ಮೀನು ಹಿಡಿದಂತೆ, ಅವರ ಜೊತೆ ಕಾಡಿನಲ್ಲಿ ಅಲೆಯುತ್ತಿದ್ದಂತೆ, ಚಾರ್ಮಾಡಿ ಘಾಟಿನಲ್ಲಿ ಚಾರಣ ಮಾಡಿದಂತೆ, ಹಕ್ಕಿಗಳ ಫೋಟೋ ಸೆರೆ ಹಿಡಿಯಲು ಅವರು ಮಾಡಿದ್ದ ಅಡಗುತಾಣದಲ್ಲಿ ಅವರ ಜೊತೆ ಕುಳಿತಂತೆ, ಹೀಗೆ ಏನೇನೋ ನನ್ನಷ್ಟಕ್ಕೆ ನಾನು ಕಲ್ಪಿಸಿಕೊಳ್ಳುತ್ತಿದ್ದೆ.
ಸ್ವಲ್ಪ ದಿನಗಳ ನಂತರ ಮೊನ್ನೆ ಮತ್ತೆ ನನ್ನ ಕನಸಿನಲ್ಲಿ ಅವರು ಅವರ ಶ್ರೀಮತಿ ರಾಜೇಶ್ವರಿಯವರ ಜೊತೆ ಕಂಡಿದ್ದರು. ನಾನು ಅವಳ ಜೊತೆ ಯಾವುದೋ ಬೆಟ್ಟ ಹತ್ತಿ ಇಳಿದು ಅಲ್ಲಿಯೇ ಹರಿಯುತ್ತಿದ್ದ ನದಿಯೊಂದರ ಬಳಿ ಬಂದು ಕುಳಿತಿದ್ದೆನು. ಅವಳು ಹಾಗೆಯೇ ನದಿ ತೀರದಲ್ಲಿ ನಡೆದು ಬರುವುದಾಗಿ ಹೊರಟಳು. ಸಾಕಷ್ಟು ಜನ ಬೆಟ್ಟ ಹತ್ತಿ ಇಳಿದಿದ್ದವರು ಅಲ್ಲಿ ಕುಳಿತಿದ್ದರು. ಅಲ್ಲಿಯೇ ಬಂಡೆಯೊಂದರ ಮೇಲೆ ಮೀನು ಹಿಡಿಯಲು ಗಾಣ ಬೀಸಿ ತೇಜಸ್ವಿಯವರು, ರಾಜೇಶ್ವರಿಯವರೊಡನೆ ಕುಳಿತಿದ್ದರು. ಅವರನ್ನು ಕಂಡೊಡನೆಯೇ ಅವರನ್ನು ಮಾತನಾಡಿಸಲು, ಅವರದೊಂದು ಫೋಟೋ ತೆಗೆದುಕೊಳ್ಳಲು ಓಡಿದೆ. ದೂರದಿಂದಲೇ ಅವರ ಫೋಟೋ ಸೆರೆ ಹಿಡಿಯಲು ನೋಡಿದರೆ ನನ್ನ ಮೊಬೈಲ್ನಲ್ಲಿ ಕ್ಯಾಮರಾ ಇಲ್ಲ. ತಕ್ಷಣ ಅವಳತ್ತ ಓಡಿ ಅವಳ ಬಳಿ ಇದ್ದ ಡಿಜಿಟಲ್ ಕ್ಯಾಮರಾ ತೆಗೆದುಕೊಂಡು ಓಡಿ ಬಂದರೆ ಇಲ್ಲಿ ತೇಜಸ್ವಿಯವರಿಲ್ಲ. ಅವರನ್ನು ಕಂಡು ಮಾತನಾಡಿಸದಿದ್ದಕ್ಕೆ, ಒಂದು ಫೋಟೋ ಕೂಡ ತೆಗೆಯಲು ಆಗದಿದ್ದಕ್ಕೆ ಬೇಸರವಾಯಿತು.
ಈಗ ಮತ್ತೆ ಅವರ ಪುಸ್ತಕ ಹಿಡಿದು ಕುಳಿತಿದ್ದೇನೆ, ಮತ್ತೆ ಅವರ ಜೊತೆ ನದಿತೀರದಲ್ಲಿ ನಡೆದಂತೆ, ಕಾಡು ತಿರುಗಿದಂತೆ, ಚಾರಣ ಮಾಡಿದಂತೆ. ಮತ್ತೊಂದು ಕನಸಿನ ನಿರೀಕ್ಷೆಯಲ್ಲಿ.
ಚಿತ್ರಕೃಪೆ: ಅಂತರ್ಜಾಲ ಮತ್ತು ಅವಧಿ
ಒಳ್ಳೆಯ ಬರಹ ಅಜಯ್, ನಾನೂ ಸಹ ನಿಮ್ಮಂತೆ ತೇಜಸ್ವಿ ಸೆಳೆತಕ್ಕೆ ಸಿಕ್ಕವನೇ. ನಾನು ಯೋಚಿಸುವ ದಿಕ್ಕನ್ನೇ ಬದಲಾಯಿಸಿದವರು ತೇಜಸ್ವಿ.
ReplyDeleteಧನ್ಯವಾದಗಳು ಗಿರೀಶಣ್ಣ.. ತೇಜಸ್ವಿಯವರ ಪುಸ್ತಕ ಓದಿದವರಾರು ಅವರ ಸೆಳೆತಕ್ಕೆ ಸಿಲುಕದಿರುವುದಿಲ್ಲ.. ಅಂತಹ ಶಕ್ತಿ ಅವರ ಕೃತಿಗಳಿಗಿದೆ. ಅವರ ವ್ಯಕ್ತಿತ್ವವೂ ಅಂತಹದ್ದೇ..
Deleteall the best
ReplyDeleteಧನ್ಯವಾದ ಆದರ್ಶ..
ReplyDeleteತೇಜಸ್ವಿಯವರು ನನ್ನೆದೆಯಲ್ಲೂ ಹೀಗೆಯೇ ಇಳಿದುಬಿಟ್ಟಿದ್ದಾರೆ ಅಜಯ್. ’ಮನುಷ್ಯನಾದವನು ಹೇಗೆ ಬದುಕಬೇಕೆಂಬುದರ’ ಮೂಲರೂಪ ಪೂಜಂತೇ. ಅವರನ್ನು ’ಕರ್ವಾಲೊ’ ಮೂಲಕ ಓದಲು ಪ್ರಾರಂಭಿಸಿದ್ದು. ಆನಂತರದಲ್ಲಿ ಎಷ್ಟರಮಟ್ಟಿಗೆ ನನ್ನನ್ನು ಅವರು ಆವರಿಸಿಬಿಟ್ಟರೆಂದರೆ ಅವರ ಪ್ರತಿಯೊಂದು ವೀಡಿಯೋಗಳು, ಕಾದಂಬರಿಗಳು, ಕಥಾ ಸಂಕಲನಗಳು ಏನು ಸಿಕ್ಕರೂ ಬಿಡದೆ ಸಂಗ್ರಹಿಸುತ್ತಿದ್ದೇನೆ. ತೇಜಸ್ವಿ ಎಂದರೆ ನನ್ನೊಳಗಿರುವ ಚಿಂತನಾ ಸೆಲೆ ಎನ್ನುವಷ್ಟರ ಮಟ್ಟಿಗೆ ಅವರು ನನ್ನೊಳಗೆ ಬೆರೆತು ಹೋಗಿಬಿಟ್ಟಿದ್ದಾರೆ. ಒಳ್ಳೆಯ ಬರಹ.
ReplyDelete- ಪ್ರಸಾದ್.ಡಿ.ವಿ.
This comment has been removed by the author.
Deleteತೇಜಸ್ವಿಯವರ "ಅಣ್ಣನ ನೆನಪು" ನಾನು ಓದಿದ ಮೊದಲ ಪುಸ್ತಕ. ಅಲ್ಲಿಂದ ಶುರುವಾದ ಅವರ ಪುಸ್ತಕಗಳ ಜೊತೆಗಿನ ಒಡನಾಟ ಇನ್ನು ಮುಂದವರೆದಿದೆ. ನಾನು ಕೂಡ ನಿಮ್ಮಂತೆಯೇ ಅವರ ಎಲ್ಲ ಪುಸ್ತಕಗಳನ್ನು, ಅವರ ಕುರಿತ ಎಲ್ಲ ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದೇನೆ. ಧನ್ಯವಾದಗಳು ಪ್ರಸಾದಣ್ಣ..
Deleteಅಜಯ್ ,ಖಂಡಿತ ತೇಜಸ್ವಿ ಅಂದರೆ ಒಂದು ವಿಸ್ಮಯ,ಒಂದು ಅದ್ಭುತ... ಅವರು ನಿನ್ನ ಕನಸಿನಲ್ಲಿ ಬಂದಿದ್ದಕ್ಕೆ ಅವರ ಪುಸ್ತಕಗಳೇ ಸಾಕ್ಷಿ... ಅವರ ಪುಸ್ತಕಗಳು ಬಹಳ ಕಾಡುತ್ತವೆ.. ನಾನು ಕೂಡ ಅವರ ಅಭಿಮಾನಿ... ಅವರಿಗಿದ್ದ ಹಲವಾರು ಅಭಿರುಚಿಗಳನ್ನು ಕಂಡು ಆಶರ್ಯ ಆಗುವುದರಲ್ಲಿ ತಪ್ಪಿಲ್ಲ...ನನ್ನ ಈ ಲೇಖನ ಓದಿ... ತೇಜಸ್ವಿ ಅವರನ್ನು ಹತ್ತಿರದಿಂದ ಕಂಡ ಅವರ ಸ್ನೇಹಿತರು ಹಂಚಿಕೊಂಡ ಸಂಗತಿಗಳು ಸಂಗತಿಗಳು ...http://giri-shikhara.blogspot.in/2012/04/blog-post.html
ReplyDeleteಧನ್ಯವಾದಗಳು ಗಿರೀಶಣ್ಣ.. ನಿಮ್ಮ ಬ್ಲಾಗ್ ಓದಿದೆ.. ಒಳ್ಳೆಯ ಬರಹ.. ತೇಜಸ್ವಿಯವರು ಮೂಡಿಗೆರೆಯಂತಹ ಊರಿನಲ್ಲಿ ಬದುಕಿದ ರೀತಿಯ ಕುರಿತು ಅವರ ಒಡನಾಡಿಗಳ ಮಾತುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ..
Deleteits very nice experince to read.... tejaswiyavara ondu pustaka matra odidini astae.. but neevu anchikondiruva ee nimma kanasanna kehlidrae avaru ondu kanasina lokanae srusti madi adannae nija swaropa anno agae namagae kottidarae antha anisutthae..... avara preetiyanna aswadisiruva neevae danyaru.... nimma mehlae namagae ega hoottae oriyuttidae ha ha ha
ReplyDeleteತೇಜಸ್ವೀ ನನಗೂ ಅತೀ ಇಷ್ಟವಾಗೊ ಲೇಖಕ.....ತುಂಬಾ ಚೆನ್ನಾಗಿದೆ...
ReplyDeleteಮೊದಲ ಬಾರಿ ನಿಮ್ಮ ಬ್ಲಾಗ್ ಗೆ ಬಂದೆ...ಖುಷಿ ಆಯ್ತು ...
ಬರೀತಾ ಇರಿ ,...ನಮಸ್ತೆ
ನಿಮ್ಮ ಮಾತೆ ಹೇಳ್ತಾ ಇದೀನಿ.. ಖುಷಿ ಅಯ್ತು.. ಬರ್ತಾ ಇರೀ.. ಬರೀತಾ ಇರೀ.. ನಮಸ್ತೇ
Deleteಅಪ್ಪ ಪುಸ್ತಕ ಸಂಗ್ರಹಾಲಯವಾದರೆ ಮಗ ಒಂದು ಭಂಡಾರ. ಅದು ತೇಜಸ್ವಿಯವರ ಟ್ರೇಡ್ ಮಾರ್ಕ್. ಅವರ ಲೇಖನಗಳ ಪರಿಚಯ ಆಗಿದ್ದು ಕರ್ವಾಲೋ ಪುಸ್ತಕದಿಂದ. ಕಾಲೇಜಿನಲ್ಲಿ ನಮಗೆ ಪಟ್ಯವಾಗಿದ್ದ ಆ ಪುಸ್ತಕದಿಂದ ಪ್ರಭಾವಕ್ಕೆ ಒಳಗಾಗಿ ಇನ್ನು ಅದು ಕಾಡುತ್ತಿದೆ. ಅಪರೂಪದ ವ್ಯಕ್ತಿ ತೇಜಸ್ವಿಯವರು. ಸುಂದರವಾದ ಲೇಖನದಿಂದ ಶುರು ಮಾಡಿದ ಬ್ಲಾಗ್ ನಿಜಕ್ಕೂ ಒಂದು ವಿಸ್ಮಯ. ಮುಂದುವರೆಯಲಿ ನಿಮ್ಮ ಕಾವ್ಯ ಕಥನದ ಧಾರೆ ಓದಲು ನಾವಿದ್ದೇವೆ!
ReplyDeleteಶ್ರೀಕಾಂತಣ್ಣ ಧನ್ಯವಾದಗಳು ನಿಮ್ಮ ಪ್ರೀತಿ ತುಂಬಿದ ಪ್ರೋತ್ಸಾಹದ ಮಾತುಗಳಿಗೆ.. ಕುವೆಂಪುರವರು ಹೋಗುವೆನು ನಾನು ಮಲೆನಾಡಿಗೆ ಎನ್ನುತ್ತಲೇ ಮೈಸೂರಿನಲ್ಲಿ ಉಳಿದರು.. ತೇಜಸ್ವಿಯವರು ಮೈಸೂರು ಬಿಟ್ಟು ಮಲೆನಾಡಿನ ಮಡಿಲು ಸೇರಿ ಎತ್ತರೆಕ್ಕೆ ಬೆಳೆದರು.. ಕುವೆಂಪುರವರು ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಡಲು ವಿಙ್ಞಾನದ ಮಂತ್ರ ಭೋಧಿಸಿದರು.. ತೇಜಸ್ವಿಯವರು ಮಂತ್ರವನ್ನು ತಂತ್ರವನ್ನಾಗಿಸಿ ವಿಙ್ಞಾನವನ್ನು ಸಾಹಿತ್ಯದಂತೆಯೇ ಸಾಕ್ಷಾತ್ಕಾರದ ಮಾರ್ಗವೆಂದು ತೋರಿಸಿದರು.. ಅವರೀರ್ವರಿಗೊಂದು ದೊಡ್ದ ಸಲಾಂ
Deleteಅಜಯ್,
ReplyDeleteತೇಜಸ್ವಿಯವರ ಬಗ್ಗೆ ಎಲ್ಲಿಯೇ ಬರಹವನ್ನು ಕಂಡರೂ ನಾನು ಓಡಿಬರುತ್ತೇನೆ ಓದಲು. ಇದನ್ನು ಓದುತ್ತಿದ್ದಂತೆ ಹಾಗೆ ತೇಜಸ್ವಿಯವರ ಪಕ್ಕ ನಿಂತಂತೆ ಭಾಶವಾಯ್ತು. ಅವರೆಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಮತ್ತೆ ನನ್ನ ಬರವಣಿಗೆ ಮತ್ತು ಫೋಟೊಗ್ರಫಿಗೂ ಕೂಡ ಅವರ ಬದುಕು, ಫೋಟೊಗ್ರಫಿಯೇ ಸ್ಫೂರ್ತಿ ನೀಡುತ್ತಿವೆ...
ಕುತೂಹಲಕರವಾಗಿ ಬರೆಯುತ್ತೀರಿ...ಮುಂದುವರಿಸಿ..
ಶಿವುರವರೇ, ನಾನು ನಿಮ್ಮಂತೆಯೇ ತೇಜಸ್ವಿಯವರ ಕುರಿತ ಬರಹಗಳನ್ನು ಎಲ್ಲಿಯೇ ಇದ್ದರೂ ಓದಲು ಓಡಿಬರುತ್ತೇನೆ.. ಅವರು ಹೇಗೆ ಬದುಕಬೇಕೆಂಬುದಕ್ಕೆ ದೊಡ್ಡ ನಿದರ್ಶನ.. ಅವರ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ.. ಧನ್ಯವಾದಗಳು..
Deleteಚೆಂದದ ಬರಹ. ಓದುತ್ತಿದ್ದರೆ ತೇಜಸ್ವಿಯವರು ನಮ್ಮ ಪಕ್ಕ ಕುಳಿತಿದ್ದರೆನೋ ಎಂದು ಅನ್ನಿಸುತ್ತದೆ. ಹೀಗೆ ಬರಗಳನ್ನು ಮುಂದುವರೆಸಿ ಅಜಯ್.
ReplyDeleteಶ್ರದ್ದೆಯ ಜೊತೆ ಕೌತುಕ ಮಿಶ್ರಿತವಾದರೆ ಪ್ರತಿಯೊಬ್ಬನಲ್ಲಿಯೂ ಒಬ್ಬ ತೇಜಸ್ವಿ ಹುಟ್ಟಿಕೊಳ್ಳುತ್ತಾನೆ.
ReplyDeleteDreams are like stars…you may never touch them, but if you follow them they will lead you to your destiny.
Good Luck ಅಜಯ್👏 👏 👏